Home ರಾಜಕೀಯ ಪತಿಯ ಪರ ಮತ ಕೇಳಿದ ರೇವತಿ ನಿಖಿಲ್ ಕುಮಾರಸ್ವಾಮಿ

ಪತಿಯ ಪರ ಮತ ಕೇಳಿದ ರೇವತಿ ನಿಖಿಲ್ ಕುಮಾರಸ್ವಾಮಿ

18
0

ಚನ್ನಪಟ್ಟಣ/ರಾಮನಗರ: ಉಪಚುನಾವಣೆಯ ಬಹಿರಂಗ ಸಭೆಯ ಕೊನೆ ದಿನವಾದ ಸೋಮವಾರ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಅವರ ಧರ್ಮಪತ್ನಿ ರೇವತಿ ನಿಖಿಲ್ ಕುಮಾರಸ್ವಾಮಿ ಅವರು ಪ್ರಚಾರ ನಡೆಸಿದರು.

ಸಭೆಯ ವೇದಿಕೆ ಮೇಲೆ ದೇವೇಗೌಡರು, ಯಡಿಯೂರಪ್ಪನವರು, ಕುಮಾರಸ್ವಾಮಿ ಅವರು ಆಸೀನರಾಗಿದ್ದರು. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಭಾಷಣ ಮುಗಿಸುವ ಹೊತ್ತಿಗೆ ಶಾಸಕಿ ಕರೆಮ್ಮ ನಾಯಕ್, ಜೆಡಿಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ ಅವರಿಬ್ಬರೂ ಸಾರ್ವಜನಿಕ ಸಾಲಿನಲ್ಲಿ ಕೂತಿದ್ದ ರೇವತಿ ಅವರನ್ನು ವೇದಿಕೆಗೆ ಕರೆತಂದರು. ಸಂಕೋಚದಿಂದಲೇ ವೇದಿಕೆಗೆ ಬಂದ ರೇವತಿ ಅವರು, ದೇವೇಗೌಡರು,ಯಡಿಯೂರಪ್ಪನವರು, ಕುಮಾರಸ್ವಾಮಿ ಅವರ ಪಾದಕ್ಕೆ ನಮಸ್ಕರಿಸಿ, ” ಎರಡು ಬಾರಿ ಸೋತಿದ್ದಾರೆ, ದಯಮಾಡಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ನೀಡಿ ಗೆಲ್ಲಿಸಿಕೊಡಿ ” ಎಂದಷ್ಟೇ ಮನವಿ ಮಾಡಿ ನಿರ್ಗಮಿಸಿದರು.

ಸೋಮವಾರ ಬೆಳಗ್ಗೆ 7 ಗಂಟೆಗೆ ಪಟ್ಟಣದ ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮೀಪ ಅವರು ನಿಖಿಲ್ ಅವರ ಪರವಾಗಿ ಮತ ಕೇಳಿದರು.

ಇದೇ ವೇಳೆ ರೈಲ್ವೆ ನಿಲ್ದಾಣದ ಬಳಿ ಟೀ ಸವಿದು ಪ್ರಚಾರ ಮಾಡಿದರು. ಅಲ್ಲಿನ ಸ್ಥಳೀಯರಿಗೆ ಕರಪತ್ರ ನೀಡಿ ನಿಖಿಲ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಪ್ರಚಾರದ ವೇಳೆ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದರು. ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡರು, ವಿದ್ಯಾರ್ಥಿಗಳು ರೇವತಿಯವರ ಜತೆಗೆ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.

ಈ ಸಂದರ್ಭದಲ್ಲಿ ರೈಲ್ವೆ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು, ಪಟ್ಟಣದ ಸಾರ್ವಜನಿಕರನ್ನು ಭೇಟಿಯಾದ ರೇವತಿ ಅವರು, ಕರಪತ್ರಗಳನ್ನು ನೀಡಿ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here