ಸುಮಾರು 2,000 ಕೋಟಿ ರೂ. ವೆಚ್ಚದಲ್ಲಿ ಮಹತ್ವಾಕಾಂಕ್ಷೆಯ ಕಾರಿಡಾರ್ ಅಭಿವೃದ್ಧಿ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ
ಯೋಜನೆಗೆ ರಾಜ್ಯ ಸರ್ಕಾದ ಆಯವ್ಯಯದಲ್ಲಿ ಅನುದಾನ ಮೀಸಲಿಡಲು ಕೋರಲಾಗಿದೆ
ಬೆಂಗಳೂರು:
ನಗರದ ಗೊರುಗುಂಟೆಪಾಳ್ಯ ಜಂಕ್ಷನ್ ಮೂಲಕ ರಾಜ್ಯದ ಶೇ. 70 ರಷ್ಟು ವಾಹನಗಳು ಸಂಚರಿಸಲಿದ್ದು, ಈ ಭಾಗದಲ್ಲಾಗುವ ಸಂಚಾರ ದಟ್ಟಣೆಯನ್ನು ತಡೆಗಟ್ಟುವ ಉದ್ದೇಶದಿಂದ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ ಜಾರಿಗೊಳಿಸಲು ಮುಂದಾಗಲಾಗಿದೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಶಾಸಕರು ಮುನಿರತ್ನ ರವರು ತಿಳಿಸಿದರು.
ತುಮಕೂರು ಮುಖ್ಯರಸ್ತೆ-ಹೊರವರ್ತುಲ ಬಳ್ಳಾರಿ ರಸ್ತೆಯ — ಗೊರಗುಂಟೆಪಾಳ್ಯ ಜಂಕ್ಷನ್ ಅನ್ನು ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ [Goraguntepalya Junction(Tumkur Road – ORR – Bellary Road) Corridor Development Project] ಜಾರಿಗೊಳಿಸುವ ಸಂಬಂಧ ಅವರು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಆಡಳಿತಗಾರ ಗೌರವ್ ಗುಪ್ತಾ, ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರು ನಾಗರಾಜ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್, ರಾಜರಾಜೇಶ್ವರಿ ನಗರ ವಲಯದ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮುನಿರತ್ನ ಮಾತನಾಡಿ: “ಗೊರುಗುಂಟೆಪಾಳ್ಯ ಜಂಕ್ಷನ್ ಮೂಲಕ ನಗರಕ್ಕೆ ರಾಜ್ಯದ ಶೇ. 70 ರಷ್ಟು ವಾಹನಗಳು ಸಂಚರಿಸಲಿದ್ದು, ಈ ಭಾಗದಲ್ಲಾಗುವ ಸಂಚಾರ ದಟ್ಟಣೆಯನ್ನು ತಡೆಗಟ್ಟುವ ಉದ್ದೇಶದಿಂದ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ ಜಾರಿಗೊಳಿಸಲು ಮುಂದಾಗಲಾಗಿದೆ.”
“ಪ್ರತಿನಿತ್ಯವೂ ಈ ಭಾಗದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗಲಿದ್ದು, ವಾರದ ಕೊನೆಯ ಎರಡು ದಿನ ಸೂಮಾರು 3 ಗಂಟೆಗಳ ಕಾಲ ಸಂಚಾರ ದಟ್ಟಣೆಯಾಗಲಿದೆ. ಒಂದು ಸಿಗ್ನಲ್ ಬಳಿ 1,000ಕ್ಕೂ ಹೆಚ್ಚು ವಾಹನಗಳು ನಿಲ್ಲಲಿದ್ದು, ನಾಗರಿಕರಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ. ಈ ಸಂಬಂಧ ಮುಖ್ಯಂತ್ರಿಗಳ ಜೊತೆ ಈ ಬಗ್ಗೆ ಚರ್ಚಿಸಿದ್ದು, ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ತಿಳಿಸಿದ್ದಾರೆ. ಈ ಯೋಜನೆಗೆ ರಾಜ್ಯ ಸರ್ಕಾದ ಆಯವ್ಯಯದಲ್ಲಿ ಅನುದಾನ ಮೀಸಲಿಡಲು ಕೋರಲಾಗಿದೆ,” ಎಂದು ತಿಳಿಸಿದರು.
ಆಯುಕ್ತರು ಎನ್.ಮಂಜುನಾಥ್ ಪ್ರಸಾದ್ ರವರು ಮಾತನಾಡಿ, ಗೊರುಗುಂಟೆಪಾಳ್ಯ ಜಂಕ್ಷನ್ ಬೆಂಗಳೂರಿಗೆ ಪ್ರಮುಖ ಹೆಬ್ಬಾಗಿಲಾಗಿದ್ದು, ಈ ಜಂಕ್ಷನ್ ಮೂಲಕ ತುಮಕೂರು ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆ, ಹಳೇ ಮದ್ರಾಸ್ ರಸ್ತೆ, ಬಳ್ಳಾರಿ ರಸ್ತೆ ಹಾಗೂ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿದೆ. ಈ ಸಂಬಂಧ ಗೊರಗುಂಟೆಪಾಳ್ಯ ಜಂಕ್ಷನ್ ಅನ್ನು ಸಿಗ್ನಲ್ ಫ್ರೀ ಕಾರಿಡಾರ್ ಮಾಡಲು ಸುಮಾರು 2,000 ಕೋಟಿ ರೂ. ವೆಚ್ಚದಲ್ಲಿ ಮಹತ್ವಾಕಾಂಕ್ಷೆಯ ಕಾರಿಡಾರ್ ಅಭಿವೃದ್ಧಿ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಅನುದಾನ ಮೀಸಲಿಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಮಾರ್ಗದಲ್ಲಿ ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಜಂಕ್ಷನ್ ಬಳಿ ಸಿಗ್ನಲ್ ಬಿದ್ದ ವೇಳೆ ಸಾವಿರಾರು ವಾಹನಗಳು ಸಾಕಷ್ಟು ಸಮಯ ನಿಂತಲ್ಲೇ ನಿಲ್ಲುತ್ತವೆ. ವಾಹನಗಳು ನಿಲ್ಲುವ ಸಮಯ ನೋಡಿದರೆ ಕೋಟ್ಯಾಂತರ ರೂ. ನಷ್ಟವಾಗಲಿದೆ. ಈ ಸಂಚಾರ ದಟ್ಟಣೆಯಿಂದ ಹೆಚ್ಚು ಸಮಯ ವ್ಯರ್ಥವಾಗಲಿದೆ. ಆದ್ದರಿಂದ ಬಿಇಎಲ್, ಹೋಟೆಲ್ ತಾಜ್ ಜಂಕ್ಷನ್, ಹೊರವರ್ತುಲ ರಿಂಗ್ ರಸ್ತೆ, ತುಮಕೂರು ರಸ್ತೆ, ಪೈಪ್ ಲೈನ್ ರಸ್ತೆ, ಹೆಚ್.ಎಂ.ಟಿ ಜಂಕ್ಷನ್ ಸೇರಿದಂತೆ 6 ಕಡೆ ಮೇಲುಸೇತುವೆ ಹಾಗೂ ಕೆಳಸೇತುವೆ ಯೋಜನೆ ಜಾರಿಗೊಳಿಸಿ ಈ ಭಾಗವನ್ನು ಸಿಗ್ನಲ್ ಫ್ರೀ ಕಾರಿಡಾರ್ ಮಾಡಿದರೆ ಸಾರ್ವಜನಿಕರು ಹೆಚ್ಚು ಸಂಚಾರ ದಟ್ಟಣೆಯಿಲ್ಲದೆ ಸುಮವಾಗಿ ಸಂಚರಿಸಬಹುದಾಗಿದೆ. ಈ ಸಂಪೂರ್ಣ ಯೋಜನೆಗೆ ಸುಮಾರು 2,000 ಕೋಟಿ ರೂ. ವ್ಯಯವಾಗಬಹುದಾಗಿದ್ದು, ಇದನ್ನು 1 ವರ್ಷದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. 4/5 ವರ್ಷಗಳು ಬೇಕಾಗಲಿದೆ. 5 ವರ್ಷದಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ ಪೂರ್ಣಗೊಳಿಸಲು ಯೋಜನೆ ರೂಪಿಸಿಕೊಂಡು, ಪ್ರತಿ ವರ್ಷದ ಆಯವ್ಯಯದಲ್ಲಿ ಇಂತಿಷ್ಟು ಅನುದಾನವನ್ನು ಮೀಸಲಿರಿಸಿ ಯೋಜನೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು.
ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ ಜಾರಿಗೊಳಿಸಲು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ಸಮಗ್ರವಾದ ನೀಲನಕ್ಷೆ ಸಿದ್ದಪಡಿಸಿ ವಿಸ್ತೃತ ಯೋಜನಾ ವರದಿ (DPR) ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಾರಿಡಾರ್ ಯೋಜನೆ ಮಾರ್ಗದಲ್ಲಿ ರಕ್ಷಣಾ ಭೂಮಿ ಹಾಗೂ ಖಾಸಗಿ ಭೂಮಿ ಬರಲಿದ್ದು, ಭೂಸ್ವಾಧೀನ ಮಾಡಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಚಾರಿ ಮಾರ್ಗ ಬದಲಾವಣೆ ಮಾಡಿಕೊಂಡು ಹಂತ-ಹಂತವಾಗಿ ಯೋಜನೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.