ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಗಾಂಧಿಬಜಾರ್ ಅನ್ನು ಪಾದಚಾರಿ ಸ್ನೇಹಿ ಮಾಡುವ ಸಂಬಂಧ ನಗರ ಭೂಸಾರಿಗೆ ನಿರ್ದೇಶನಾಲಯ(ಡಲ್ಟ್) ವತಿಯಿಂದ ಯೋಜನೆ ಸಿದ್ದಪಡಿಸಿದೆ.
ಗಾಂಧಿಬಜಾರ್ ಅನ್ನು ಪಾದಚಾರಿ ಸ್ನೇಹಿ ತಾಣವನ್ನಾಗಿ ರೂಪಿಸಲು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್)ವು ಯೋಜನೆ ಸಿದ್ದಪಡಿಸಿದ್ದು, ಟ್ಯಾಗೋರ್ ಪಾರ್ಕ್ ವೃತ್ತದಿಂದ ರಾಮಕೃಷ್ಣ ಆಶ್ರಮವರೆಗಿನ ಸುಮಾರು 700 ಮೀಟರ್ ಉದ್ದದ ರಸ್ತೆಯಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ವಾಹನ ಸಂಚಾರವನ್ನು ನಿಷೇಧಿಸಿ, ಎಲೆಕ್ಟ್ರಿಕ್ ವಾಹನ, ಸೈಕಲ್ ಹಾಗೂ ಪಾದಚಾರಿಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಸ್ಥಳಿಯವಾಗಿ ಜನಾಭಿಪ್ರಾಯವನ್ನು ಸಂಗ್ರಹಿಸಿ ಯೋಜನೆಗೆ ಅಂತಿಮ ರೂಪುರೇಷೆ ನೀಡಲು ಆಯುಕ್ತರು ಎನ್. ಮಂಜುನಾಥ್ ಪ್ರಸಾದ್ ರವರು ಡಲ್ಟ್ ಅಧಿಕಾರಿಗಳಿಗೆ ತಿಳಿಸಿದರು.
ಗಾಂಧಿಬಜಾರ್ ರಸ್ತೆಯಲ್ಲಿ ಹೂವು, ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳು ಸೇರಿದಂತೆ ಇನ್ನಿತರೆ ಚಟುವಟಿಕೆಗಳ ಪ್ರಮುಖ ತಾಣವಾಗಿದೆ. ಇಲ್ಲಿ ಬೀದಿ ಬದಿ ವ್ಯಾಪಾರಿಗಳು ಹೆಚ್ಚಿದ್ದು, ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿರುವುದಿಂದ ಹೆಚ್ಚು ಸಂಚಾರದಟ್ಟಣೆಯಾಗುತ್ತಿದೆ. ಆದ್ದರಿಂದ ಸದ್ಯ ಆಗುತ್ತಿರುವ ಸಂಚಾರಿ ದಟ್ಟಣೆಯನ್ನು ತಡೆದು ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಪಾದಚಾರಿ ಸ್ನೇಹಿಯಾಗಿ ಗಾಂಧಿಬಜಾರನ್ನು ಮಾಡಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಡಲ್ಟ್ ರೂಪಿಸಿರುವ ಯೋಜನೆಯಲ್ಲಿ ದ್ವಿಚಕ್ರ ವಾಹನಗಳು, ಕಾರು, ಆಟೋ ರಿಕ್ಷಾಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ರಸ್ತೆ ಮಾರ್ಗದಲ್ಲಿ ವರ್ತಕರು ಹಾಗೂ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಸುಸಜ್ಜಿದ ಪಾದಚಾರಿ ಮಾರ್ಗ, ಮಾರಾಟ ಮಾಡಲು ಮಳಿಗೆಗಳಿಗೆ ಸ್ಥಳಾವಕಾಶ ಸೇರಿದಂತೆ ಇನ್ನಿತರೆ ರೂಪುರೇಷೆಗಳನ್ನು ಮಾಡಿಕೊಳ್ಳಲಾಗಿದೆ. ಗಾಂಧಿಬಜಾರ್ ರಸ್ತೆ ಹೂವು ಮಾರಾಟ ಮಾಡುವ ಕಟ್ಟಡದ ಬಳಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಸ್ಥಾಪಿಸಲು ಕೂಡಾ ಯೋಜನೆ ರೂಪಿಸಲಾಗಿದ್ದು, ಇದರಿಂದ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದು ತಪ್ಪಲಿದೆ.
ಗಾಂಧಿಬಜಾರ್ ಅನ್ನು ಉತ್ತಮ ಪಾದಚಾರಿ ಸ್ನೇಹಿ ಹಾಗೂ ಐತಿಹಾಸಿಕ ತಾಣವನ್ನಾಗಿ ಬದಲಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಡಲ್ಟ್ ಹಾಗೂ ಪಾಲಿಕೆಯ ಅನುದಾನದಿಂದ ಉತ್ತಮ ತಾಣವನ್ನಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನಾಭಿಪ್ರಾಯ ಪಡೆದು ಯೋಜನೆಗೆ ಅಂತಿಮ ರೂಪುರೇಷೆ ನೀಡಿ ಯೋಜನೆ ಜಾರಿಗೊಳಿಸಲು ಅಗತ್ಯ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಸಚಿವರು ಭೈರತಿ ಬಸವರಾಜು, ಶಾಸಕರು ಉದಯ್ ಬಿ. ಗರುಡಾಚಾರ್, ಡಲ್ಟ್ ಆಯುಕ್ತರು ಶ್ರೀಮತಿ ಮಂಜುಳಾ, ಆಯುಕ್ತರು ಮಂಜುನಾಥ್ ಪ್ರಸಾದ್ ರವರು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ನಡೆದ ಸಭೆಯಲ್ಲಿ ಡಲ್ಟ್ ವತಿಯಿಂದ ಗಾಂಧಿಬಜಾರ್ ಅನ್ನು ಪಾದಚಾರಿ ಸ್ನೇಹಿಯಾಗಿಸುವ ಬಗ್ಗೆ ಸಿದ್ದಪಡಿಸಿರುವ ನೀಲನಕ್ಷೆಯನ್ನು ಪ್ರಾತ್ಯಕ್ಷಿಕೆ ಮೂಲಕ ವೀಕ್ಷಿಸಿದರು. ಈ ವೇಳೆ ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ರಮೇಶ್, ಅಧೀಕ್ಷಕ ಅಭಿಯಂತರರಾದ ಲೋಕೇಶ್, ಬಸವರಾಜ್ ಕಬಾಡೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.