
ವಿಕಲಚೇತನೆಯ ಸೋಗಿನಲ್ಲಿ ಕಳವು ಮಾಡುತ್ತಿದ್ದವಳ ಬಂಧನ
ಬೆಂಗಳೂರು :
ವಿಕಲಚೇತನೆಯ ಸೋಗಿನಲ್ಲಿ ರಾತ್ರೋರಾತ್ರಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಮನೆಗಳ್ಳಿಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ಮಂಜುಶ್ರೀ (45) ಬಂಧಿತ ಆರೋಪಿ. ಬಂಧಿತಳಿಂದ 27 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು, ಇಬ್ಬರು ಹೆಣ್ಣು ಮಕ್ಕಳನ್ನು ಟ್ರಸ್ಟ್ ಕ್ಕೆ ಸೇರಿಸಿದ್ದಳು.
ಕೆ.ಆರ್.ಪುರ ಮಾರ್ಕೆಟ್ ನಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಆರೋಪಿತೆ ಐಷಾರಾಮಿ ಜೀವನ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಳ್ಳತನಕ್ಕೆ ಮುಂದಾಗಿದ್ದಳು. ಮೊದಲು ಕಾರಿನಲ್ಲಿ ಬಂದು ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಈಕೆ ನಂತರ ಮನೆಯಿಂದ ಸ್ವಲ್ಪ ದೂರದಲ್ಲೇ ಕಾರು ನಿಲ್ಲಿಸಿ ವಿಕಲಚೇತನೆಯ ರೀತಿ ಕುಂಟುತ್ತಾ ಬಂದು ಬಳಿಕ ನಂತರ ಮನೆಯ ಚಿಲಕ ತೆಗೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.