ಬೆಳಗಾವಿಯಲ್ಲಿ ಆರ್ಎಸ್ಎಸ್ ಅಖಿಲ ಭಾರತ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಆರಂಭ; ಶಾಖಾ ವಿಸ್ತರಣೆ, ಶತಮಾನೋತ್ಸವ ಕಾರ್ಯಕ್ರಮಗಳ ಪರಿಶೀಲನೆ ಪ್ರಮುಖ ಅಜೆಂಡಾ
ಬೆಳಗಾವಿ, ಜುಲೈ 10: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಅಖಿಲ ಭಾರತ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಶುಕ್ರವಾರ ಬೆಳಗಾವಿಯಲ್ಲಿ ಆರಂಭವಾಗಿದ್ದು, ಸಂಘದ ಶತಮಾನೋತ್ಸವ ಕಾರ್ಯಕ್ರಮಗಳು, ಶಾಖಾ ವಿಸ್ತರಣೆ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಉನ್ನತ ಮಟ್ಟದ ಚರ್ಚೆಗಳು ನಡೆಯಲಿವೆ.
ಸಭೆಯಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹ ಸರ್ಕಾರ್ಯವಾಹರು, ಅಖಿಲ ಭಾರತೀಯ ಕಾರ್ಯ ವಿಭಾಗಗಳ ಪ್ರಮುಖರು, ಸಹ ಪ್ರಮುಖರು, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು, ದೇಶದ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಚಾರಕರು ಹಾಗೂ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಭಾಗವಹಿಸಿದ್ದಾರೆ.
ಆರ್ಎಸ್ಎಸ್ ಪ್ರಕಟಣೆಯ ಪ್ರಕಾರ, 2026ರ ಮಾರ್ಚ್ ನಂತರ ದೇಶದ ವಿವಿಧ ಭಾಗಗಳಲ್ಲಿ ನಡೆದ ತರಬೇತಿ ವರ್ಗಗಳು, ಶಾಖಾ ಮಟ್ಟದಲ್ಲಿ ಅನುಷ್ಠಾನಗೊಂಡಿರುವ ಕಾರ್ಯಯೋಜನೆಗಳು ಹಾಗೂ ಸಂಘಟನೆಯ ವಿವಿಧ ಚಟುವಟಿಕೆಗಳ ಕುರಿತು ಸಭೆಯಲ್ಲಿ ಸವಿಸ್ತಾರವಾಗಿ ಪರಿಶೀಲನೆ ನಡೆಯಲಿದೆ.
ಸಭೆಯಲ್ಲಿ ಆರ್ಎಸ್ಎಸ್ ಶಾಖೆಗಳ ವಿಸ್ತರಣೆ, ಶತಮಾನೋತ್ಸವ ವರ್ಷದ ಅಂಗವಾಗಿ ಕೈಗೊಂಡಿರುವ ಸಂಘಟನೆ ವಿಸ್ತರಣೆ ಕಾರ್ಯಗಳ ಪರಿಶೀಲನೆ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳ ಸ್ಥಾಪನೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಲಿದೆ.
ಇದರ ಜೊತೆಗೆ, ಶತಮಾನೋತ್ಸವ ವರ್ಷದ ಅಂಗವಾಗಿ ಈಗಾಗಲೇ ನಡೆದ ಕಾರ್ಯಕ್ರಮಗಳ ವಿಮರ್ಶೆ, ಮುಂದಿನ ಕಾರ್ಯಕ್ರಮಗಳ ಯೋಜನೆ ಹಾಗೂ 2026–27ನೇ ಸಾಲಿನಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ದೇಶವ್ಯಾಪಿ ಪ್ರವಾಸ ಕಾರ್ಯಕ್ರಮ ಕುರಿತೂ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಆರ್ಎಸ್ಎಸ್ ಪ್ರಕಟಣೆಯ ಪ್ರಕಾರ, ಶತಮಾನೋತ್ಸವ ವರ್ಷ (2025–26) ಅಂಗವಾಗಿ ಆಯೋಜಿಸಿರುವ ಉಳಿದ ಕಾರ್ಯಕ್ರಮಗಳು 2026ರ ಅಕ್ಟೋಬರ್ 20ರಂದು ವಿಜಯದಶಮಿವರೆಗೆ ದೇಶದಾದ್ಯಂತ ಮುಂದುವರಿಯಲಿವೆ.
ಅಖಿಲ ಭಾರತ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆಯನ್ನು ಆರ್ಎಸ್ಎಸ್ನ ಪ್ರಮುಖ ಆಂತರಿಕ ಸಂಘಟನಾ ಸಭೆಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಈ ಸಭೆಯಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿ, ಮುಂದಿನ ಅವಧಿಯ ಕಾರ್ಯತಂತ್ರ ಮತ್ತು ಸಂಘಟನೆ ವಿಸ್ತರಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.