ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತೊಮ್ಮೆ ಗಂಭೀರ ಪ್ರಶ್ನೆಗೆ ಒಳಗಾಗಿದೆ. ಬೈಕ್ ಟ್ಯಾಕ್ಸಿ ಚಾಲಕ ಹಾಗೂ ಫುಡ್ ಡೆಲಿವರಿ ಬಾಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ದಾಖಲಾಗಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೈಕ್ ಟ್ಯಾಕ್ಸಿಯಲ್ಲಿ ಮಹಿಳಾ ಟೆಕ್ಕಿಗೆ ಕಿರುಕುಳ
ಜನವರಿ 7ರಂದು ನಾಗರಭಾವಿ ಅಂಡರ್ಪಾಸ್ ಬಳಿ ಈ ಘಟನೆ ನಡೆದಿದೆ. ಪ್ರತಿದಿನ ಕಚೇರಿಗೆ ಕ್ಯಾಬ್ನಲ್ಲಿ ತೆರಳುತ್ತಿದ್ದ ಮಹಿಳಾ ಟೆಕ್ಕಿಯೊಬ್ಬರು, ಟ್ರಾಫಿಕ್ ಕಾರಣದಿಂದ ಬೈಕ್ ಟ್ಯಾಕ್ಸಿ ಬುಕ್ ಮಾಡಿಕೊಂಡಿದ್ದರು.
ಪ್ರಯಾಣ ಆರಂಭವಾದ ಕೆಲವೇ ದೂರದಲ್ಲಿ ಚಾಲಕ ಅನುಚಿತವಾಗಿ ವರ್ತನೆ ಆರಂಭಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಸುರಕ್ಷತೆಗಾಗಿ ಬ್ಯಾಗ್ ಅನ್ನು ಮಧ್ಯೆ ಇಟ್ಟರೂ ಚಾಲಕ ಮತ್ತೆ ಮತ್ತೆ ಹತ್ತಿರ ಬರಲು ಯತ್ನಿಸಿದ್ದಾನೆ. ನಾಗರಭಾವಿ ಅಂಡರ್ಪಾಸ್ ಬಳಿ ಅಸಭ್ಯ ವರ್ತನೆ ಮಿತಿಮೀರಿದಾಗ ಮಹಿಳೆ ತಕ್ಷಣ ಬೈಕ್ ನಿಲ್ಲಿಸುವಂತೆ ಕೂಗಿದ್ದಾರೆ.
ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿ, 112 ಸಹಾಯವಾಣಿ ಮೂಲಕ ದೂರು ದಾಖಲಿಸಲಾಗಿದೆ. ನಂತರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆ, ಬೈಕ್ ಟ್ಯಾಕ್ಸಿ ಚಾಲಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಫುಡ್ ಡೆಲಿವರಿ ಬಾಯ್ನಿಂದ ಯುವತಿಗೆ ದೌರ್ಜನ್ಯ ಯತ್ನ
ಇನ್ನೊಂದು ಪ್ರಕರಣ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಫುಡ್ ಡೆಲಿವರಿ ಬಾಯ್, ರಸ್ತೆ ಮೂಲಕ ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿ, ಆಕೆಯನ್ನು ತಬ್ಬಿಕೊಂಡು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿ ಕಿರುಚಾಡಿದಾಗ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಬೈಕ್ ತೆಗೆದುಕೊಂಡು ಹೋಗಲು ಬಂದಾಗ ಮತ್ತೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
ಮಹಿಳಾ ಸುರಕ್ಷತೆ ಕುರಿತು ಗಂಭೀರ ಆತಂಕ
ಇತ್ತೀಚಿನ ದಿನಗಳಲ್ಲಿ ಬೈಕ್ ಟ್ಯಾಕ್ಸಿ ಹಾಗೂ ಡೆಲಿವರಿ ಸೇವೆಗಳ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ.
ಪೊಲೀಸರು, ಮಹಿಳೆಯರು ಯಾವುದೇ ಅನುಚಿತ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
