ಯೋಗೇಶ್ ಗೌಡ ಹತ್ಯೆ ಪ್ರಕರಣ ತೀರ್ಪು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಆರೋಪಿಗಳಿಗೆ ದೋಷಿ ತೀರ್ಪು
ಬೆಂಗಳೂರು/ಧಾರವಾಡ: 2016ರಲ್ಲಿ ನಡೆದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 19 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ. ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ಟ ಅವರು ತೀರ್ಪು ಪ್ರಕಟಿಸಿದರು.

ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡರ ಹತ್ಯೆ ಪ್ರಕರಣವು ರಾಜ್ಯದ ಪ್ರಮುಖ ರಾಜಕೀಯ ಪ್ರಕರಣಗಳಲ್ಲಿ ಒಂದಾಗಿದ್ದು, ಈ ಪ್ರಕರಣದಲ್ಲಿ ಆರಂಭದಲ್ಲಿ ಒಟ್ಟು 21 ಜನರನ್ನು ಆರೋಪಿಗಳಾಗಿ ಗುರುತಿಸಲಾಗಿತ್ತು. ಇದರಲ್ಲಿ ಇಬ್ಬರು ಮಾಫಿ ಸಾಕ್ಷಿಗಳಾಗಿ (Approvers) ಪರಿಗಣಿಸಲ್ಪಟ್ಟಿದ್ದು, ಉಳಿದ 19 ಜನರ ವಿರುದ್ಧ ವಿಚಾರಣೆ ನಡೆದಿತ್ತು.
ದೀರ್ಘಕಾಲದ ವಿಚಾರಣೆ ಮತ್ತು ಸಾಕ್ಷ್ಯಾಧಾರಗಳ ಪರಿಶೀಲನೆಯ ನಂತರ, ನ್ಯಾಯಾಲಯವು ಎಲ್ಲಾ 19 ಆರೋಪಿಗಳನ್ನೂ ದೋಷಿಗಳೆಂದು ತೀರ್ಮಾನಿಸಿದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (A15) ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.
ದೋಷಿಗಳ ಪಟ್ಟಿಯಲ್ಲಿ ಇರುವವರು:
A2 ವಿಕ್ರಮ್ ಬಳ್ಳಾರಿ,
A3 ಕೀರ್ತಿಕುಮಾರ್ ಬೆಳ್ಳಟ್ಟಿ,
A4 ಸಂದೀಪ್ ಸವದತ್ತಿ,
A5 ವಿನಾಯಕ್ ಕಟಗಿ,
A6 ಮಹಾಬಲೇಶ್ವರ ಹೊಂಗಲ,
A7 ಸಂತೋಷ್ ಸವದತ್ತಿ,
A8 ದಿನೇಶ್,
A9 ಅಶ್ವತ್,
A10 ಸುನೀಲ್,
A11 ನಜೀರ್ ಅಹಮದ್,
A12 ಶಾನವಾಜ್,
A13 ನೂತನ,
A14 ಹರ್ಷಿತ್ ಸಿ,
A15 ವಿನಯ್ ಕುಲಕರ್ಣಿ,
A16 ಚಂದ್ರಶೇಖರ್ ಇಂಡಿ,
A18 ವಿಕಾಸ್ ಕಲ್ಬುರ್ಗಿ,
A19 ಚನ್ನಕೇಶವ ಟಿಂಗರಿಕರ್,
A20 ವಾಸುದೇವ ನಾಯಕ,
A21 ಸೋಮಶೇಖರ್ ನಿಯಮಗೌಡ.
ಇದಲ್ಲದೆ, ಬಸವರಾಜ ಮುತ್ತಗಿ ಸೇರಿದಂತೆ ಇಬ್ಬರು ಆರೋಪಿಗಳು ಮಾಫಿ ಸಾಕ್ಷಿಗಳಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದು, ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಫೆಬ್ರವರಿ 28ರಂದು ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದು ಹೊರಬಂದಿದ್ದ ವಿನಯ್ ಕುಲಕರ್ಣಿ ಅವರಿಗೆ ಇದೀಗ ಮತ್ತೆ ಜೈಲು ಶಿಕ್ಷೆ ಎದುರಾಗುವ ಸಾಧ್ಯತೆ ಇದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ನಿರ್ಧರಿಸಲಾಗುತ್ತದೆ.
ಕಾನೂನು ತಜ್ಞರ ಪ್ರಕಾರ, ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಿದಲ್ಲಿ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಅವರು ಮೇಲ್ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ.
ತೀರ್ಪು ಹೊರಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಪರಿಸರದಲ್ಲಿ ಹಾಗೂ ವಿನಯ್ ಕುಲಕರ್ಣಿ ಅವರ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಆರಂಭದಲ್ಲಿ ರಾಜ್ಯ ಪೊಲೀಸ್ ತನಿಖೆ ನಡೆಸಿದ ಈ ಪ್ರಕರಣವನ್ನು ನಂತರ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಸಿಬಿಐ 200ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆ ನಡೆಸಿ, ಸಮಗ್ರ ತನಿಖೆಯ ನಂತರ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು.
ಇದೀಗ ದೋಷಿ ತೀರ್ಪು ಹೊರಬಿದ್ದಿರುವ ಹಿನ್ನೆಲೆ, ಶಿಕ್ಷೆಯ ಪ್ರಮಾಣ ಮತ್ತು ಮುಂದಿನ ಕಾನೂನು ಹೋರಾಟದ ಮೇಲೆ ಎಲ್ಲರ ಗಮನ ನೆಟ್ಟಿದೆ.
