ಬೆಂಗಳೂರು:
ನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಪೋಸ್ಟರ್ ಬದಲಾಯಿಸುವಾಗ ಕಾಲು ಜಾರಿ ಬಿದ್ದು ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿರುವ ಘಟನೆ ಗಾಂಧಿನಗರದಲ್ಲಿ ನಡೆದಿದೆ.
ಕಟೌಟ್ ಮೇಲೆ ಹತ್ತಿ ಪೋಸ್ಟರ್ ಬದಯಿಸುತ್ತಿದ್ದಾಗ ಕಾಲು ಜಾರಿ ಬಿದ್ದು ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಬಟ್ಟೆ ಮೇಲೆ ರಾಜು ಸೆಕ್ಯೂರಿಟಿ ಏಜೆನ್ಸಿ, ಸುಲ್ತಾನ್ ಪಾಳ್ಯ ಎಂದು ಬರೆಯಲಾಗಿದ್ದು, ಅವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಘಟನೆ ವೇಳೆ ಚಿತ್ರಮಂದಿರಕ್ಕೆ ಸಂಬಂಧಪಟ್ಟ ಯಾರೊಬ್ಬರು ಸ್ಥಳದಲ್ಲಿರಲಿಲ್ಲ. ಸೆಕ್ಯುರಿಟಿ ಸಿಬ್ಬಂದಿ ಕೆಳಗೆ ಬಿದ್ದಿರುವುದನ್ನು ಕಂಡು ದಾರಿಹೋಕರು ರಕ್ಷಣೆಗೆ ಧಾವಿಸಿದ್ದರು. ತೀವ್ರ ರಕ್ತಸ್ರಾವವಾಗಿದ್ದರಿಂದ ಸಿಬ್ಬಂದಿ ಮೃತಪಟ್ಟಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದರು.
ಕಟೌಟ್ ಬದಲಾವಣೆ ಮಾಡಲು ಚಿತ್ರಮಂದಿರದಲ್ಲಿ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಆದರೂ, ಪೋಸ್ಟರ್ ಬದಲಾವಣೆ ಮಾಡುವ ಕೆಲಸವನ್ನು ಸೆಕ್ಯುರಿಟಿ ಸಿಬ್ಬಂದಿಗೆ ಹೇಳಿದವರು ಯಾರು? ಯಾರ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂಬುದು ತನಿಖೆಯಿಂದ ಬಹಿರಂಗಗೊಳ್ಳಬೇಕಾಗಿದೆ ಎಂದರು.
ಘಟನೆಗೆ ಸಂಬಂಧಿಸಿದಂತೆ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.