ಬೆಂಗಳೂರು:
ಮಹಾನ್ ಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಪಾದಿಸಿರುವ ತತ್ವ-ಆದರ್ಶಗಳನ್ನು ಅರ್ಥ ಮಾಡಿಕೊಂಡು ಅವರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯುವಂತ ಸಂಕಲ್ಪ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನಸೌಧದ ಮುಂಬಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಮಾ ಸಮಾಜದ ನಿರ್ಮಾಣ ನಮ್ಮ ಸರ್ಕಾರದ ಗುರಿಯಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು, ಈ ನಿಟ್ಟಿನಲ್ಲಿ ನಾವು ಅಗತ್ಯವಿರುವ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿದ್ದೇವೆ ಎಂದರು.
ಅಂಬೇಡ್ಕರ್ ವ್ಯಕ್ತಿ ಮಾತ್ರರಲ್ಲ, ಅವರು ಸ್ವತಂತ್ರ ಭಾರತದ ಚೈತನ್ಯಸ್ವರೂಪರಾಗಿರುವ ಆದರ್ಶನಾಯಕ. ಸಂವಿಧಾನ ಶಿಲ್ಪಿ, ಭಾರತರತ್ನ, ಡಾ ಬಿ.ಆರ್.ಅಂಬೇಡ್ಕರ್ ‘ಮಹಾ ಪರಿನಿರ್ವಾಣ ದಿನ’ದ ಅಂಗವಾಗಿ ಇಂದು ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಲಾಯಿತು. ಸಚಿವರು, ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. pic.twitter.com/cuKrKgPiNp
— B.S. Yediyurappa (@BSYBJP) December 6, 2020
ಡಾ.ಬಿ.ಆರ್.ಅಂಬೇಡ್ಕರ್ ಪುಣ್ಯ ಸ್ಮರಣಿಯ ದಿನದಂದು ನಾವು ಮಾನವೀಯತೆಯನ್ನು ಜಾಗೃತಗೊಳಿಸಬೇಕು, ನಾಡಿನಲ್ಲಿ ಶೋಷಣೆಮುಕ್ತ ಸಮಾಜವನ್ನು ಕಟ್ಟಲು ನಾವೆಲ್ಲರು ಶ್ರಮಿಸೋಣ. ಅಸ್ಪೃಶ್ಯತೆ, ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಿ, ಸಮ ಸಮಾಜಕ್ಕಾಗಿ ಶ್ರಮಿಸಿದ ಬಾಬ ಸಾಹೇಬ್ ಅಂಬೇಡ್ಕರ್ ನಮಗೆಲ್ಲರಿಗೂ ಸಹ ಆದರ್ಶ ಪ್ರಾಯಾರಾಗಿದ್ದಾರೆ. ಡಾ ಅಂಬೇಡ್ಕರ್ ಅವರದ್ದು ಬಹುಮುಖಿ ವ್ಯಕ್ತಿತ್ವ ದೇಶದ ಅಭಿವೃದ್ಧಿಗೆ ಬಾಬಾ ಸಾಹೇಬರ ಕೊಡುಗೆ ಅನನ್ಯವಾದದ್ದು, ಪ್ರಪಂಚ ಕಂಡಂತಹ ಅತ್ಯಂತ ಪ್ರಭಾವಶಾಲಿ ಪ್ರತಿಭಾವಂತ ಅರ್ಥಶಾಸ್ತ್ರಜ್ಞರು ಅವರಾಗಿದ್ದರು ಎಂದರು.
ಮಹಿಳೆಯರಿಗೆ ಸಮಾನ ಹಕ್ಕು. ಕಾರ್ಮಿಕರ ಕಲ್ಯಾಣ, ಶಿಕ್ಷಣ ಹಾಗೂ ಸ್ವಾತಂತ್ರದ ಹಕ್ಕಿಗಾಗಿ ಹೋರಾಡಿದ್ದಾರೆ. ದೇಶಕ್ಕೆ ಸಶಕ್ತ ಸಂವಿಧಾನ ನೀಡುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಒಂದು ಮೂರ್ತ ರೂಪ ನೀಡಿದ್ದರು. ವಿಶ್ವದಲ್ಲಿಯೇ ಮಾದರಿ ಅನಿಸಿಕೊಂಡ ಭಾರತದ ಸಂವಿದಾನ ಸಮಾನತೆ ಭಾತೃತ್ವ ಸೌಹಾರ್ದತೆಯನ್ನು ಸಾರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.