ಹುಬ್ಬಳ್ಳಿ:
ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರು, ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ಹಿರಿಯ ರಂಗಕರ್ಮಿ ಡಾ.ಟಿ.ಬಿ. ಸೊಲಬಕ್ಕನವರ (73) ಶುಕ್ರವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ. 2.45ರ ಸುಮಾರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇತ್ತೀಚೆಗೆ ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದೊಡ್ಡಾಟ, ಶಿಲ್ಪ ಕಲಾಕೃತಿಗಳಲ್ಲಿನ ಇವರ ಸೃಜನಶೀಲ ಪ್ರತಿಭೆ ಹಾಗೂ ಕೊಡುಗೆ ಪರಿಣಗಣಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ಇವರ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಕೇಂದ್ರಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ 2002ರಲ್ಲಿ ಅತ್ಯುತ್ತಮ ಕಲಾ ತರಬೇತಿ ಸಂಸ್ಥೆ ಎಂದು ಪ್ರಶಸ್ತಿ ನೀಡಿತ್ತು. ಅಲ್ಲದೇ, 2001ರಲ್ಲಿ ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ, 2002ರಲ್ಲಿ ಸಂಘಟನಾ ಪ್ರಶಸ್ತಿ, 2005ರಲ್ಲಿ ರಾಜ್ಯೋತ್ಸವ ಹಾಗೂ 2006ರಲ್ಲಿ ಲಲಿತ ಕಲಾ ಅಕಾಡೆಮಿ ಪ್ರಶಸ್ತಿಗೆ ಇವರು ಪಾತ್ರರಾಗಿದ್ದರು.
ಇನ್ನು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಲಂಡನ್ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್, ಅಮೆರಿಕದ ರೆಕಾರ್ಡ್ ಸೆಕ್ಟರ್, ನೇಪಾಳದ ಎವರೆಸ್ಟ್ ವರ್ಲ್ಡ್ ರೆಕಾರ್ಡ್, ಅಮೇಜಿಂಗ್ ವರ್ಲ್ಡ್ ರೆಕಾರ್ಡ್, ಯೂನಿಕ್ ವರ್ಲ್ಡ್ ರೆಕಾರ್ಡ್ಗಳಿಗೂ ಇವರು ಭಾಜನರಾಗಿದ್ದರು.
ಮೃತರು ಪತ್ನಿ ಸಾವಿತ್ರಮ್ಮ, ಪುತ್ರಿ ವೇದಾರಾಣಿ, ಪುತ್ರ ರಾಜಹರ್ಷ ಹಾಗೂ ಅಳಿಯ ಉದ್ಯಮಿ ಪ್ರಕಾಶ ದಾಸನೂರ ಅವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ರಾಕ್ ಗಾರ್ಡನ್ ಪಕ್ಕ ನ್ಯೂ ವರ್ಕ್ ಶಾಪ್ (ದುಂಡಸಿ ದಾರಿ) ಹತ್ತಿರ ನೆರವೇರಲಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೊಲಬಕ್ಕನನವರ ನಿಧನಕ್ಕೆ ಸೋಕ ವ್ಯಕ್ತಪಡಿಸಿದ್ದಾರೆ. ಡಾ|| ಟಿ. ಬಿ. ಸೋಲಬಕ್ಕನವರ ನಿಧನರಾಗಿದ್ದು ತೀವ್ರ ದುಃಖದ ವಿಷಯ, ಅವರ ನಿಧನದಿಂದ ಜಾನಪದ ಲೋಕದ ಪ್ರಮುಖ ಕೊಂಡಿ ಕಳಚಿದಂತಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಹೇಳಿದ್ದಾರೆ.