ಬೆಂಗಳೂರು:
ಲ್ಯಾಪ್ ಟಾಪ್ ಮತ್ತು ಇಂಟರ್ ನೆಟ್ ಬಳಸಿ ರಾಜ್ಯದ ಸರ್ಕಾರದ ವೆಬ್ ಸೈಟ್ ಸೇರಿ ಅಂತಾರಾಷ್ಟ್ರೀಯ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ, ಅಕ್ರಮ ಮಾರ್ಗದಲ್ಲಿ ಹಣ ಸಂಪಾದನೆಯಲ್ಲಿ ತೊಡಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಹಾಗೂ ಮಾದಕ ವ್ಯಸಗಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಜಯನಗರ ನಿವಾಸಿಯಾಗಿರುವ ಶ್ರೀಕೃಷ್ಣ (25)ನ ಬಂಧನ ಸಿಸಿಬಿ ಪೊಲೀಸರ ಮಹತ್ವದ ಕಾರ್ಯಾಚರಣೆಯಾಗಿದ್ದು, ಆರೋಪಿಯ ಬಂಧನದಿಂದ ಹಲವು ವೆಬ್ ಸೈಟ್ ಹ್ಯಾಕ್, ವಿದೇಶದಿಂದ ಡಾರ್ಕ್ ವೆಬ್ ಮೂಲಕ ಮಾದಕವಸ್ತು ತರಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅವರು ಸುದ್ದಿಗೋಷ್ಠಿಯ್ಲಲಿ ತಿಳಿಸಿದರು.
ನವೆಂಬರ್ 4ರಿಂದು ವಿದೇಶದಿಂದ ಅಂಚೆ ಮೂಲಕ ಹೈಡ್ರೋ ಗಾಂಜಾ ತರಿಸಲಾಗಿತ್ತು. ಅದನ್ನು ತೆಗೆದುಕೊಂಡು ಹೋಗಲು ಚಾಮರಾಜಪೇಟೆ ಫಾರಿನ್ ಪೋಸ್ಟ್ ಕಚೇರಿಗೆ ಬಂದಿದ್ದ ಸದಾಶಿವನಗರ ನಿವಾಸಿ, ಆರೋಪಿ ಎಂ.ಸುಜಯ್ ಎಂಬಾತನನ್ನು ಪೊಲೀಸರು ಖಚಿತ ಮಾಹಿತಿ ಮೇರೆಗೆ 500 ಗ್ರಾಂ ತೂಕದ ಹೈಡ್ರೋ ಗಾಂಜಾದ ಸಮೇತ ಬಂಧಿಸಿದ್ದರು. ಈ ಬಗ್ಗೆ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ವಿಚಾರಣೆಯ ವೇಳೆ ಆತ ನೀಡಿದ್ದ ಮಾಹಿತಿ ಆಧರಿಸಿ, ಹೇಮಂತ್ ಮುದ್ದಪ್ಪ, ಸುನೀಷ್ ಹೆಗ್ಡೆ, ಪ್ರಸಿದ್ ಶೆಟ್ಟಿ ಸೇರಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು, ಈ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಯಿತು ಎಂದು ಕಮಲ್ ಪಂತ್ ತಿಳಿಸಿದರು.
ತನಿಖೆಯ ಸಂದರ್ಭದಲ್ಲಿ, ಆರೋಪಿ ಸುನೀಷ್ ಹೆಗ್ಡೆ ಹಾಗೂ ಪ್ರಸಿದ್ ಶೆಟ್ಟಿ ಸೋದರ ಸಂಬಂಧಿಗಳಾಗಿದ್ದು, ಪ್ರಸಿದ್ ಶೆಟ್ಟಿ ಹಾಗೂ ಸುನೀಷ್ ಹೆಗ್ಡೆ ಒಟ್ಟಾಗಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಡಾರ್ಕ್ ವೆಬ್ ಎಂಬ ವೆಬ್ ಸೈಟ್ ಮೂಲಕ ಹೈಡ್ರೋ ಗಾಂಜಾವನ್ನು ಬುಕ್ ಮಾಡಿ, ಶ್ರೀಕೃಷ್ಣ ಮುಖಾಂತರ ಬಿಟ್ ಕಾಯಿನ್ ಅನ್ನು ಖರೀದಿ ಮಾಡಿ, ಈ ಬಿಟ್ ಕಾಯಿನ್ ಮೂಲಕ ಹಣವನ್ನು ವಿದೇಶಕ್ಕೆ ವರ್ಗಾವಣೆ ಮಾಡಿ, ವಿದೇಶದಿಂದ ಹೈಡ್ರೋ ಗಾಂಜಾವನ್ನು ಅಂಚೆ ಮೂಲಕ ತರಿಸಿಕೊಳ್ಳುತ್ತಿದ್ದರು. ಮಾತ್ರವಲ್ಲ ಚಾಮರಾಜಪೇಟೆಯಲ್ಲಿರುವ ಫಾರಿನ್ ಪೋಸ್ಟ್ ಆಫೀಸ್ ನಲ್ಲಿ ಈ ಹೈಡ್ರೋ ಗಾಂಜಾವನ್ನು ಹೇಮಂತ್ ಕ್ಲಿಯರೆನ್ಸ್ ಮಾಡಿ ಬಿಡಿಸಿಕೊಂಡು ಬಂದು ಸರಬರಾಜು ಮಾಡಿ ಮನೀಷ್ ಹೆಗ್ಡೆ, ಪ್ರಸಿದ್, ಸುಜಯ್, ಶ್ರೀಕೃಷ್ಣ ಹಾಗೂ ಇತರರು ಸೇವನೆ ಮಾಡುತ್ತಿದ್ದರು. ಅಲ್ಲದೆ ಇತರರಿಗೂ ಸರಬರಾಜು ಮಾಡುತ್ತಿದ್ದರು. ನವೆಂಬರ್ 17ರಂದು ಆರೋಪಿ ಶ್ರೀಕೃಷ್ಣನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜಯನಗರ ನಿವಾಸಿಯಾಗಿದ್ದು, ಪಿಯುಸಿವರೆಗೆ ಬೆಂಗಳೂರಿನಲ್ಲಿ ಹಾಗೂ 2014-2017ನೆ ಸಾಲಿನವರೆಗೆ ನೆದರ್ ಲ್ಯಾಂಡ್ ದೇಶದ ಅಮ್ ಸ್ಟರ್ಡ್ ಡಾಮ್ ನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಬೆಂಗಳೂರಿಗೆ ವಾಪಾಸು ಬಂದಿದ್ದಾನೆ.
ಕಂಪ್ಯೂಟರ್ ಮತ್ತು ಇಂಟರ ನೆಟ್ ಬಳಕೆ, ಪ್ರೋಗಾಮಿಂಗ್ ನಲ್ಲಿ ಅತ್ಯಂತ ನಿಪುಣನಾಗಿರುವ ಈತ ಪ್ರಥಮವಾಗಿ RuneScape ಎಂಬ ಆನ್ ಲೈನ್ ಗೇಮ್ ಅನ್ನು ಹ್ಯಾಕ್ ಮಾಡಿದ್ದು, ನಂತರ ವಿವಿಧ ಭಾರತೀಯ ಪೋಕರ್ ವೆಬ್ ಸೈಟ್, ಆನ್ ಲೈನ್ ಬಿಟ್ ಕಾಯಿನ್ಸ್ ಹಾಗೂ ಇತರ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ ಹಣ ಸಂಪಾದನೆ ಮಾಡಿಕೊಳ್ಳುವ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಅವರು ತಿಳಿಸಿದರು.
ಪ್ರಕರಣದ ಆರೋಪಿಗಳಾದ ಸುನೀಷ್ ಹೆಗ್ಡೆ, ಪ್ರಸಿದ್ ಶೆಟ್ಟಿ, ಎಂ.ಸುಜಯ್, ಹೇಮಂತ್ ಮುದ್ದಪ್ಪ ಹಾಗೂ ಆರೋಪಿ ಶ್ರೀಕೃಷ್ಣ ಡಾರ್ಕ್ ವೆಬ್ ಸೈಟ್ ಮೂಲಕ ಬಿಟ್ ಕಾಯಿನ್ ಗಳ ಮುಖಾಂತರ ಹಣ ಪಾವತಿಸಿ ಮಾದಕ ವಸ್ತುಗಳನ್ನು ತರಿಸಿಕೊಂಡು ಆರೋಪಿಗಳೆಲ್ಲರೂ ಇತರರ ಜತೆ ಸೇರಿಕೊಂಡು ಸುನೀಷ್ ಹೆಗ್ಡೆ ಹಾಗೂ ಪ್ರಸಿದ್ ಶೆಟ್ಟಿಗೆ ಸೇರಿದ ಜಯನಗರದ ಫ್ಲಾಟ್ ಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಪಾರ್ಟಿ ಗಳನ್ನು ಆಯೋಜಿಸುತ್ತಿದ್ದರು. ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜುಮಾಡಿಕೊಂಡು ಸೇವನೆ ಮಾಡುತ್ತಿದ್ದರು. ಅಲ್ಲದೆ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಸಂಚು ರೂಪಿಸಿಕೊಂಡು ವೆಬ್ ಸೈಟ್ ಹ್ಯಾಕರ್ ಶ್ರೀಕೃಷ್ಣ ಮೂಲಕ ಭಾರತ ಸೇರಿದಂತೆ ವಿವಿಧ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತಿದ್ದರು.
ಅದರಲ್ಲಿ ಮುಖ್ಯವಾಗಿ 2019ನೆ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್ ಮೆಂಟ್ ವೆಬ್ ಸೈಟ್ ಹಾಕ್ ಮಾಡಿರುವುದನ್ನು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸಿಐಡಿ ಘಟಕದಲ್ಲಿ ಪ್ರಕರಣ ದಾಖಲಾಗಿ ತನಿಖೆಯ ಹಂತದಲ್ಲಿದೆ ಎಂದು ಅವರು ತಿಳಿಸಿದರು.
2019ನೆ ಸಾಲಿನಲ್ಲಿ ಆರೋಪಿಗಳು ಶ್ರೀಕೃಷ್ಣ ಮೂಲಕ ವಿವಿಧ ಗೇಮಿಂಗ್ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿಸಿ, ಬೇರೆ ಬೇರೆ ಆಟಗಾರರ ಕಾರ್ಡ್ ಗಳನ್ನು ನೋಡಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವುದು, ಆ ವೆಬ್ ಸೈಟ್ ಗಳ ಡಾಟಾ ಗಳನ್ನು ಹ್ಯಾಕ್ ಮೂಲಕ ಕದಿಯುವುದು, ಕೆಲವು ವೆಬ್ ಸೈಟ್ ಗಳ ಡೇಟಾವನ್ನು ಸ್ಥಗಿತಿಗೊಳಿಸಿ ನಂತರ ಮಾಲೀಕರನ್ನು ಸಂಪರ್ಕಿಸಿ ಹೆದರಿಸಿ, ಅವರಿಂದ ಹಣ ಪಡೆದು ವಂಚನೆ ಮಾಡುವುದು, ಆನ್ ಲೈನ್ ಮೂಲಕ ನಡೆಯುವ ಬಿಟ್ ಕಾಯಿನ್ ಗಳ ವರ್ಗಾವಣೆಯನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ಸಂಪಾದಿಸುತ್ತಿರುವ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಕಮಲ್ ಪಂತ್ ವಿವರಿಸಿದರು.
ಆರೋಪಿಗಳು ಜಿ.ಜಿ.ಪೋಕರ್ ಎಂಬ ಚೀನಾ ವೆಬ್ ಸೈಟ್ ಅನ್ನು ಶ್ರೀಕೃಷ್ಣ ಮೂಲಕ ಹ್ಯಾಕ್ ಮಾಡಿಸಿ, ಆ ಕಂಪನಿಯಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳುವ ಉದ್ದೇಶದಿಂದ ಕೃತ್ಯಕ್ಕೆ ಇಳಿದಿದ್ದರು. ಚಿಕ್ಕಮಗಳೂರು ಹಾಗೂ ಕಬಿನಿಯಲ್ಲಿ ರೆಸಾರ್ಟ್, ಬೆಂಗಳೂರಿನ ಪಂಚತಾರಾ ಹೋಟೆಲ್, ರೆಸಾರ್ಟ್ ಗಳು, ದೇವನಹಳ್ಳಿ ಹತ್ತಿರುವಿರುವ ಪ್ರಸಿದ್ ಶೆಟ್ಟಿಯ ಫಾರ್ಮ್ ಹೌಸ್, ಸುನೀಷ್ ಹೆಗ್ಡೆ ಮತ್ತು ಪ್ರಸಿದ್ ಶೆಟ್ಟಿಯ ಸಂಜಯನಗರದ ಫ್ಲಾಟ್ ಗಳಲ್ಲಿ ಮಾದಕ ವಸ್ತುಗಳನ್ನು ಸೇವೆನೆ ಮಾಡುತ್ತಾ, ಜಿ.ಜಿ.ಪೋಕರ್ ವೆಬ್ ಸೈಟ್ ಅನ್ನು ಆರೋಪಿ ಶ್ರೀಕೃಷ್ಣ ಹ್ಯಾಕ್ ಮಾಡುವ ಪ್ರಯತ್ನದಲ್ಲಿದ್ದಾಗ ಆತನ ಲ್ಯಾಪ್ ಟಾಪ್ ಸಮೇತ ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಈ ತಂಡವು ಮೊದಲಿಗೆ ಡ್ರಗ್ಸ್ ಅಕ್ರಮಗಳನ್ನು ಪ್ರಾರಂಭಿಸಿದ್ದು, ನಂತರ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿತ್ತು. ಬಳಿಕ ಬಿಟ್ ಕಾಯಿನ್ ಅಕ್ರಮಗಳಲ್ಲಿ ಭಾಗಿಯಾಗುತ್ತಾ, ಪೋಕರ್ ಗೇಮ್ ಅಪ್ಲಿಕೇಷನ್ ಹ್ಯಾಕ್ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿದ್ದರು. ಹಾಲಿ ಸರ್ಕಾರದ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ ವಂಚನೆ ಮಾಡುವ ಮಟ್ಟಕ್ಕೆ ಬಂದಿದ್ದರು. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಕಮಲ್ ಪಂತ್ ತಿಳಿಸಿದರು.
ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಕೆ.ಪಿ.ರವಿಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ಮಾದಕದ್ರವ್ಯ ನಿಗ್ರಹ ಕಳದ ಸಹಾಯಕ ಪೊಲೀಸ್ ಆಯುಕ್ತ ಕೆ.ಸಿ.ಗೌತಮ್ ಅವರ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ ಪೂಜಾರ ಹಾಗೂ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.