ಎಡಿಜಿಪಿ ಸೌಮೇಂದು ಮುಖರ್ಜಿ ಇವರಿಗೆ ವರದಿ ನೀಡುವಂತೆ ಸೂಚನೆ
ಬೆಂಗಳೂರು:
ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರ್ಕಿಹೋಲಿ ಅವರ ಲೈಂಗಿಕ ಸಿಡಿ ಸಂಬಂಧಿತ ವಿಷಯದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಪತ್ರ ಬರೆದು ಎಡಿಜಿಪಿ ಸೌಮೇಂದು ಮುಖರ್ಜಿ ಅವರ ನೇತೃತ್ವದಲ್ಲಿ ಎಸ್‌ಐಟಿ ರಚಿಸುವಂತೆ ನಿರ್ದೇಶನ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜೊತೆ ದೂರವಾಣಿ ಕರೆ ಮೂಲಕ ಮಾತನಾಡಿರುವ ಜಾರಕಿಹೊಳಿ ತನಿಖೆ ಆಗಲೇಬೇಕು ಎಂದು ಪಟ್ಟು ಹಿಡಿದು ಶೀಘ್ರ ತನಿಖೆಗೆ ಆದೇಶಿಸುವಂತೆ ಆಗ್ರಹಿಸಿದರು.
ಈ ಬಗ್ಗೆ ಬೆಳಗ್ಗೆ ಸಿಎಂ ಬಿಎಸ್‍ವೈ ಪ್ರತಿಕ್ರಿಯಿಸಿದ್ದು, ತನಿಖೆ ಬಗ್ಗೆ ನಿನ್ನೆ ಮನವಿ ಕೊಟ್ಟಿದ್ದಾರೆ. ಗೃಹ ಸಚಿವ ಬೊಮ್ಮಾಯಿ ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತರಿಗೆ ಬರೆದು ಪತ್ರ ಪ್ರಕಾರ: “ದಿನಾಂಕ 9. 3.2021 ರಂದು ಮಾಜಿ ಮಂತ್ರಿಗಳಾದ ಶ್ರೀ ರಮೇಶ್ ಲ ಜಾರಕಿಹೊಳಿ ರವರು ನನಗೆ ಪತ್ರ ಬರೆದು, ಅವರ ವಿರುದ್ಧ ದಿನಾಂಕ ೦೨-೦೩-೨೦೨೧ ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದು ಅರ್ಜಿ ನೀಡಿದ್ದು, ಅದರಲ್ಲಿ ಅವರ ವಿರುದ್ಧ ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶವಿದ್ದು ಇದರಲ್ಲಿ ಹಲವಾರು ಜನ ಸೇರಿ ಷಡ್ಯಂತ್ರ ರೂಪಿಸಿರುವಂಥದ್ದು ಬಹಳ ಸ್ಪಷ್ಟವಾಗಿರುತ್ತದೆ ಎಂದು ತಿಳಿಸಿರುತ್ತಾರೆ.”
“ಈ ಹಿನ್ನೆಲೆಯಲ್ಲಿ ಈ ಷಡ್ಯಂತ್ರವನ್ನು ರೂಪಿಸಿರುವ ಹಾಗೂ ಇದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಕೂಲಂಕುಶವಾಗಿ ವಿಚಾರಣೆ ಯನ್ನು ಮಾಡಲು ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲು ಹಾಗೂ ಅದರ ನೇತೃತ್ವವನ್ನು ಶ್ರೀ ಸೌಮೇಂದು ಮುಖರ್ಜಿ, ಎಡಿಜಿಪಿ ಇವರಿಗೆ ವಹಿಸುವುದು ಮತ್ತು ಈ ಬಗ್ಗೆ ಸಂಪೂರ್ಣ ವರದಿಯನ್ನು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ನೀಡುವಂತೆ ಸೂಚಿಸಿದೆ,” ಗೃಹ ಸಚಿವ ಹೇಳಿದರು.