ಬೆಂಗಳೂರು:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾಗಿ ಸಿಆರ್‌ಪಿಸಿ 164ರಡಿ ಹೇಳಿಕೆ ದಾಖಲಿಸಿದ ನಂತರ ಪೊಲೀಸರು ಆಕೆಯನ್ನು ಆಡುಗೋಡಿಯಲ್ಲಿರುವ ವಿಶೇಷ ವಿಚಾರಣಾ ಕೊಠಡಿಗೆ ಕರೆತಂದು ವಿಚಾರಣೆಗೊಳಪಡಿಸಿದರು.
ನ್ಯಾಯಾಲಯದ ಸೂಚನೆಯಂತೆ ಯುವತಿ ಕಾರಿನಲ್ಲಿ ಆಡುಗೋಡಿಗೆ ಬಂದಿದ್ದು, ಉನ್ನತಾಧಿಕಾರಿಗಳಿಂದ ವಿಚಾರಣೆ ಎದುರಿಸಿದಳು. ವಿಶೇಷ ವಿಚಾರಣಾ ಕೊಠಡಿ ಸುತ್ತಮುತ್ತ 50ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು.
ಎಸ್‌ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ,ಎಸಿಪಿ ಕವಿತಾ ಹಾಗೂ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಜಂಟಿಯಾಗಿ ಯುವತಿಯನ್ನು ಪ್ರಾಥಮಿಕ ಹಂತದಲ್ಲಿ ವಿಚಾರಣೆಗೆ ಒಳಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಂಡರು.
ಯುವತಿಯ ಗುರುತು ಪತ್ತೆ, ಸಿಡಿಯಲ್ಲಿದ್ದ ಧ್ವನಿ ಪರೀಕ್ಷೆ, ಘಟನೆ ನಡೆದ ಸ್ಥಳ, ರಮೇಶ ಜಾರಕಿಹೊಳಿ ಅವರ ಸಂಪರ್ಕ ಹೇಗಾಯಿತು? ಎಂಬಿತ್ಯಾದಿ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಯುವತಿ ಮುಂದಿಟ್ಟರು.
ವಿಚಾರಣೆ ಸಂದರ್ಭದಲ್ಲಿ ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನಾನು ಮಾಡಿರುವ ಆರೋಪಗಳು ಸತ್ಯವಾಗಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಯುವತಿಯ ಪ್ರಾಥಮಿಕ ವಿಚಾರಣೆ ಮುಕ್ತಾಯವಾಗಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ನೋಟಿಸ್ ನೀಡಿ ಕಳುಹಿಸಲಾಗಿದೆ. ನಾಳೆ ಯುವತಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ಮ್ಯಾಜಿಸ್ಟ್ರೇಟ್ ಎದುರು ಸಂತ್ರಸ್ತ ಯುವತಿ ಹೇಳಿಕೆ ದಾಖಲು https://kannada.thebengalurulive.com/sex-scandal-victim-records-statement-before-magistrate/