ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಮಂಗಳವಾರ ಮ್ಯಾಜಿಸ್ಟ್ರೇಟ್ ಎದುರು ತನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ.
ಇಂದು ಮಧ್ಯಾಹ್ನ ವಸಂತನಗರದ ಗುರುನಾನಕ್ ಭವನದಲ್ಲಿ ಯುವತಿ ನೀಡಿರುವ ಹೇಳಿಕೆಯನ್ನು ಎರಡು ಕ್ಯಾಮರಾಗಳಲ್ಲಿ ದಾಖಲಿಸಲಾಗಿದೆ. ಇದಕ್ಕೂ ಮುನ್ನ ಯುವತಿ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಹಿನ್ನೆಲೆಯಲ್ಲಿ ಎಸಿಪಿ ನಜ್ಮಾ ಫಾರೂಖಿ ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ನೀಡಲಾಗಿತ್ತು.

ಮ್ಯಾಜಿಸ್ಟ್ರೇಟ್ ಎದರು ಹೇಳಿಕೆ ದಾಖಲು ಪ್ರಕ್ರಿಯೆ ಬಳಿಕ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಯುವತಿಯನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗಾಗಿ ಆಡುಗೋಡಿಯ ಟೆಕ್ನಿಕಲ್ ವಿಂಗ್ ಗೆ ಕರೆದೊಯ್ಯುತ್ತಿದ್ದಾರೆ.
ನಂತರ ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿಯ ವೈದ್ಯಕೀಯ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆಕೆಗೆ ಅನಾರೋಗ್ಯವಿರುವುದಾಗಿ ವಕೀಲರು ತಿಳಿಸಿರುವ ಕಾರಣ ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗುತ್ತಿದೆ. ಇದೇ ವೇಳೆ ಕೊರೋನಾ ಸೋಂಕು ಪತ್ತೆ ಪರೀಕ್ಷೆಗೂ ಸಿಡಿ ಯುವತಿಯನ್ನು ಒಳಪಡಿಸಲಾಗುವುದು ಎಂದು ತಿಳಿದುಬಂದಿದೆ.