ಶಿರೂರು/ಕಾರವಾರ: 10 ಮಂದಿಯನ್ನು ಬಲಿ ಪಡೆದಿರುವ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಡೆಬಿಡದೇ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಸಿಎಂ ಸ್ಥಳ ವೀಕ್ಷಣೆ ಮಾಡಿದರು. ಸಿದ್ದರಾಮಯ್ಯ ಭೇಟಿ ವೇಳೆ ಸ್ಥಳದಲ್ಲಿ ಮಳೆಯಾಗುತ್ತಿತ್ತು. ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ರೇನ್‌ಕೋಟ್, ಗಮ್ ಬೂಟ್ ಧರಿಸಿ ಕೊಡೆ ಹಿಡಿದು ಅಧಿಕಾರಿಗಳ ಜೊತೆ ಸಿಎಂ ಸ್ಥಳ ಪರಿಶೀಲಿಸಿದರು.
ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜುಲೈ 16ರಂದು ಮಳೆಯಿಂದ ಶಿರೂರು ಬಳಿ ಗುಡ್ಡ ಕುಸಿದಿದೆ. ದುರಂತದಲ್ಲಿ 10 ಜನ ಸಾವನ್ನಪ್ಪಿದ್ದಾರೆ. ಈವರೆಗೆ 7 ಜನ ಶವ ಪತ್ತೆಯಾಗಿದೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದರು.
ದುರಂತದಲ್ಲಿ ಗ್ಯಾಸ್ ಟ್ಯಾಂಕರ್, ಲಾರಿ ಕೊಚ್ಚಿ ಹೋಗಿದೆ. ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ನಡೆಸಲು ಸೂಚಿಸಿದ್ದೇನೆ. ಸದನ ನಡೆಯುತ್ತಿರುವುದರಿಂದ ತಕ್ಷಣ ಬರಲು ಆಗಿಲ್ಲ. ಉತ್ತರ ಕನ್ನಡ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.
ಇನ್ನು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಗುಡ್ಡ ಕುಸಿದಿರುವ ಆರೋಪ ಕೇಳಿಬಂದಿದ್ದು, ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳುತ್ತೇವೆ. ರಕ್ಷಣಾ ಕಾರ್ಯಾಚರಣೆ ಮುಕ್ತಾಯ ಬಳಿಕ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
“ವಿಧಾನಸಭಾ ಅಧಿವೇಶನ ನಡೆಯುತ್ತಿದ್ದುದರಿಂದ ಇಂದು ಭೇಟಿ ನೀಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಎಲ್ಲಾ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದೆ. ಸಾವನ್ನಪ್ಪಿದವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕೆಂದು ಘೋಷಿಸಲಾಗಿದೆ. ಈಗಾಗಲೇ ಅದನ್ನು ವಿತರಿಸಲಾಗಿದೆ. ಒಂದು ವೇಳೆ ಭೂ ಕುಸಿತದಲ್ಲಿ ಇನ್ಯಾರಾದರೂ ಸಾವನ್ನಪ್ಪಿದ್ದಾರೆ ಅವರಿಗೂ 5 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು,” ಎಂದರು.