ಯಶವಂತಪುರ-ಯಲಹಂಕ ಹಾಗೂ ಬೆಂ.ಗ್ರಾಮಾಂತರ-ವಿಜಯಪುರ ಜಿಲ್ಲೆಗಳಲ್ಲಿ ಹೊಸ ಜಿಟಿಟಿಸಿ ಸ್ಥಾಪನೆ: ಡಿಸಿಎಂ
ಬೆಂಗಳೂರು:
ರಾಜ್ಯದ ವಿವಿಧೆಡೆಯಲ್ಲಿರುವ ಕರ್ನಾಟಕ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರಗಳು (ಜಿಟಿಟಿಸಿ) ನೀಡುವ ವೃತ್ತಿಪರ ಕೋರ್ಸುಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಮುಂದಿನ ವರ್ಷದಿಂದ 15,000 ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡಿ ಕುಶಲ ಕಾರ್ಮಿಕರನ್ನಾಗಿ ರೂಪಿಸುವ ಗುರಿಯನ್ನು ರಾಜ್ಯ ಸರಕಾರ ಹಾಕಿಕೊಂಡಿದೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಪ್ರತಿಷ್ಠಿತ ಕರ್ನಾಟಕ ಉಪಕರಣಾಗಾರ ಹಾಗೂ ತರಬೇತಿ ಸಂಸ್ಥೆ (ಜಿಟಿಟಿಸಿ)ಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ವಿಷಯವನ್ನು ಪ್ರಕಟಿಸಿದರು.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜಿಟಿಟಿಸಿ ನೀಡುವ ತರಬೇತಿಗೆ ವಿಪರೀತ ಬೇಡಿಕೆ ಇದ್ದು, ಇದುವರೆಗೂ ವರ್ಷಕ್ಕೆ 6000 ಮಂದಿಗಷ್ಟೇ ವಾರ್ಷಿಕ ಅಲ್ಪಾವಧಿ ತರಬೇತಿ ನೀಡಲಾಗುತ್ತಿತ್ತು. ಇನ್ನು ಕೈಗಾರಿಕೆ ಉದ್ಯೋಗ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕುಶಲಭರಿತ ಮಾನವ ಸಂಪನ್ಮೂಲವನ್ನು ಕೈಗಾರಿಕೆಗಳಿಗೆ ಒದಗಿಸಲಾಗುವುದು ಎಂದರು.
ಸದ್ಯಕ್ಕೆ ಎಲ್ಲ ಜಟಿಟಿಸಿಗಳಲ್ಲಿ 2ರಿಂದ 3 ತಿಂಗಳ ಅಲ್ಪಾವಧಿ ತರಬೇತಿ ಕೋರ್ಸುಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಇದೇ ತರಬೇತಿಯನ್ನು ಮತ್ತಷ್ಟು ವಿಸ್ತೃತಗೊಳಿಸಲಾಗುವುದು ಎಂದ ಡಿಸಿಎಂ, ಈ ತರಬೇತಿಯಿಂದ ಕೈಗಾರಿಕೆ ಮತ್ತು ಅಭ್ಯರ್ಥಿಗೂ ಉಪಯೋಗವಾಗಬೇಕು, ಇದು ಸರಕಾರದ ಉದ್ದೇಶವಾಗಿದೆ ಎಂದರು.
ಬೆಂಗಳೂರಿನಲ್ಲಿ ಇನ್ನೆರಡು ಜಿಟಿಟಿಸಿ:
ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಒಂದು ಜಿಟಿಟಿಸಿ (ರಾಜಾಜಿನಗರ) ಇದ್ದು, ಶೀಘ್ರದಲ್ಲೇ ಇನ್ನೂ ಎರಡು ಜಿಟಿಟಿಸಿಗಳನ್ನು ಯಲಹಂಕ ಮತ್ತು ಯಶವಂತಪುರದಲ್ಲಿ ಸ್ಥಾಪನೆ ಮಾಡಲಾಗುವುದು. ಹೆಚ್ಚು ಡಿಮಾಂಡ್ ಇರುವ ಮೆಕಟ್ರಾನಿಕ್ಸ್ (ಮೆಕಾನಿಕಲ್-ಎಲೆಕ್ಟ್ರಾನಿಕ್ಸ್) ವಿಭಾಗವನ್ನು ಇನ್ನೂ ಕೆಲವು ಜಿಟಿಟಿಸಿಗಳಲ್ಲೂ ಆರಂಭಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ರಾಜಾಜಿನಗರದಲ್ಲಿ ಕಾರ್ಯಾಚರಿಸುತ್ತಿರುವ ಜಿಟಿಟಿಸಿಯನ್ನು 1972ರಲ್ಲಿ ಸ್ಥಾಪನೆ ಮಾಡಲಾಗಿದ್ದು ಅತ್ಯುತ್ತಮ ಗುಣಮಟ್ಟದಿಂದ ನಡೆಯುತ್ತಿದೆ. ಇಡೀ ರಾಜ್ಯದಲ್ಲಿಯೇ ಇದೊಂದು ಪ್ರತಿಷ್ಠಿತ ಕೈಗಾರಿಕಾ ತರಬೇತಿ ಕೇಂದ್ರವಾಗಿ ಹೆಸರಾಗಿದೆ. ರಾಜ್ಯದಲ್ಲಿ ಒಟ್ಟು 24 ಜಿಟಿಟಿಸಿಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ. ಶೀಘ್ರದಲ್ಲೇ ವಿಜಯಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೂತನ ಜಿಟಿಟಿಸಿಗಳನ್ನು ತೆರೆಯಲಾಗುವುದು. ಚಳ್ಳಕೆರೆ, ಕೊಪ್ಪಳ, ಚಿತ್ರದುರ್ಗ, ಹುಣಸೂರು ಮತ್ತು ಮಡಿಕೇರಿಗಳಲ್ಲಿ ನಿರ್ಮಾಣ ಹಂತದಲ್ಲಿರುವ ಜಿಟಿಟಿಸಿ ಕ್ಯಾಂಪಸ್ಸುಗಳು ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲಿವೆ ಎಂದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿರುವ ಜಿಟಿಟಿಸಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಅದಕ್ಕೆ ಅಗತ್ಯವಾದ ಅನುದಾನವನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಪಡೆಯಲು ಸೂಚಿಸಲಾಗಿದೆ. ಬೆಂಗಳೂರು, ಬೆಳಗಾವಿ, ಧಾರವಾಡ ಜಿಟಿಟಿಸಿಗಳಲ್ಲಿರುವ ಯಂತ್ರೋಪಕರಣಗಳು ಹಳೆಯದಾಗಿದ್ದು, ಇವುಗಳನ್ನು ಸಾಧ್ಯವಾದಷ್ಟು ಮೇಲ್ದರ್ಜೆಗೆ ಏರಿಸುವುದು ಅಥವಾ ಯಂತ್ರಗಳನ್ನೇ ಅಳವಡಿಸಲಾಗುವುದು ಎಂದರು ಡಾ.ಅಶ್ವತ್ಥನಾರಾಯಣ.
ತರಬೇತಿ ಮತ್ತು ಉತ್ಪಾದನೆ:
ಈಗಾಗಲೇ ಎಲ್ ಅಂಡ್ ಟಿ, ಇಸ್ರೋ, ಏರೋಸ್ಪೇಸ್, ಎಚ್‌ಎಎಲ್ ಮುಂತಾದ ಕಡೆಗಳಿಂದ ಜಿಟಿಟಿಸಿಗಳಿಗೆ ಬೇಡಿಕೆ ಬರುತ್ತಿದೆ. ಆಯಾ ಕಂಪನಿಗಳ ಬೇಡಿಕೆಗಳಿಗೆ ತಕ್ಕಂತೆ ಇಲ್ಲಿ ಉತ್ಪನ್ನಗಳನ್ನು ತಯಾರಿಸಿ ಕೊಡಲಾಗುತ್ತಿದೆ. ಒಂದೆಡೆ ತರಬೇತಿ, ಇನ್ನೊಂದೆಡೆ ಉತ್ಪಾದನೆ ಕೂಡ ಆಗಬೇಕು. ಲಭ್ಯವಿರುವ ಯಂತ್ರಗಳು ಎರಡಕ್ಕೂ ಉಪಯೋಗವಾಗಬೇಕು. ಪ್ರತೀ ಜಿಟಿಟಿಸಿಯೂ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂಬುದು ಸರಕಾರದ ಉದ್ದೇಶವಾಗಿದೆ ಎಂದು ಡಿಸಿಎಂ ತಿಳಿಸಿದರು.
Progress on opening of new GTTCs in Vijayapura, Bengaluru Rural and additional centres in Bengaluru Urban districts was also discussed. Our Government is committed to ensure a conducive learning environment for the students to bridge the industry-academia gap.
— Dr. Ashwathnarayan C. N. (@drashwathcn) December 30, 2020
2/2
ಕರ್ನಾಟಕ ಉಪಕರಣಾಗಾರ ಹಾಗೂ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಿಟಿಟಿಸಿಯ ವರ್ಕ್ ಶಾಪ್ ಹಾಗೂ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.