ಬೆಂಗಳೂರು:
ಅಗತ್ಯಕ್ಕನುಸಾರವಾಗಿ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯಾದೇ ಹೋದರೆ ನಾವೇನು ನೇಣುಹಾಕಿಕೊಳ್ಳಲಾಗುತ್ತದೆಯೇ? ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅಸಹಾಯಕತೆಯ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ವೇಳೆ ಸುದ್ದಿಗಾರರು ಹೈಕೋರ್ಟ್ ಆದೇಶದಂತೆ ಕೇಂದ್ರವಿನ್ನೂ ಪೂರ್ತಿಯಾಗಿ ಕರ್ನಾಟಕಕ್ಕೆ ವ್ಯಾಕ್ಸಿನ್ ಪೂರೈಸಿಲ್ಲವಲ್ಲ ಎಂಬ ಪ್ರಶ್ನೆಗೆ ಮಾತನಾಡಿದ ಡಿವಿಎಸ್, ನ್ಯಾಯಾಲಯ ಇಷ್ಟು ವ್ಯಾಕ್ಸಿನ್ ಕೊಡಿ ಅಷ್ಟು ಕೊಡಿ ಎಂದು ಹೇಳುತ್ತದೆ.ಕೋರ್ಟ್ ಹೇಳಿದೆಯೆಂದ ಮಾತ್ರಕ್ಕೆ ವ್ಯಾಕ್ಸಿನ್ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಮಾಡಲಾಗದಿದ್ದರೆ ನೇಣುಹಾಕಿಕೊಳ್ಳಬೇಕೇ? ಎಂದರು.
ರಾಜಕೀಯ ಲಾಭಕ್ಕಾಗಿ ನಾವು ಪ್ಲಾನ್ ಆಫ್ ಆಕ್ಷನ್ ಮಾಡಿಲ್ಲ.ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ.ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಆಗಲಿಲ್ಲ.ಅದು ನಮ್ಮ ಪ್ರಯತ್ನ ಮೀರಿದ್ದಾಗಿದೆ.ಕಳೆದ ಬುಧವಾರದವರೆಗೆ ಕರ್ನಾಟಕದಲ್ಲಿ ಇನ್ನು 98,000ಡೋಸ್ ವ್ಯಾಕ್ಸಿನ್ ಸಂಗ್ರಹವಿದೆ.ಕೇಂದ್ರದಿಂದ ಇನ್ನು 75,000ಡೋಸ್ ಬರಬೇಕಾಗಿದೆ.ಇದುವರೆ ಒಂದು ಕೋಟಿ ಹದಿನೆಂಟು ಲಕ್ಷಕ್ಕು ಹೆಚ್ಚು ವ್ಯಾಕ್ಸಿನ ಕೊಡಲಾಗಿದೆ.ನೇರವಾಗಿ ಪ್ರಧಾನಿಯವರೇ ವ್ಯಾಕ್ಸಿನೇಷನ್ ಅಭಿಯಾನದ ಉಸ್ತುವಾರಿ ವಹಿಸಿದ್ದಾರೆ.ಇನ್ನು ಒಂದು ವಾರದೊಳಗೆ ಗೊಂದಲಗಳು ಬಗೆ ಹರಿಯುತ್ತದೆ.ಅದಕ್ಕಾಗಿಯೇ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನಿಲ್ಲಿಸಲಾಗಿದೆ.ನಲವತ್ತೈದು ವರ್ಷ ಮೇಲ್ಪಟ್ಟವರಿಗೆ ಈಗ ವ್ಯಾಕ್ಸಿನೇಷನ್ ಮುಂದುವರಿಸಲಾಗಿದೆ ಎಂದು ಡಿ.ವಿ.ಸದಾನಂದಗೌಡ ಹೇಳಿದರು.