ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಬುಧವಾರ ಅವರು ವಿಧಾನಸಭಾ ಕಲಾಪಗಳಲ್ಲಿ ಭಾಗವಹಿಸದೇ ಬೆಳಗಾವಿಯ ಪ್ರವಾಸಿ ಮಂದಿರದಲ್ಲೇ ವಿಶ್ರಾಂತಿ ಪಡೆದರು.
ಕೇಂದ್ರ ಸರ್ಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ನಡೆಸುತ್ತಿರುವುದಾಗಿ ಆರೋಪಿಸಲಾಗುತ್ತಿರುವ ದ್ವೇಷ ರಾಜಕಾರಣವನ್ನು ಖಂಡಿಸಿ, ಸುವರ್ಣ ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆ ಭಾಗವಹಿಸಿದ್ದರು. ನಂತರ ಸದನ ಪ್ರವೇಶಿಸಿದ್ದ ಅವರು, ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯಲು ಪ್ರವಾಸಿ ಮಂದಿರಕ್ಕೆ ತೆರಳಿದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಆರೋಗ್ಯ ವಿಚಾರಿಸಲು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಜಿ.ಟಿ.ದೇವೇಗೌಡ ಸೇರಿದಂತೆ ಹಲವು ನಾಯಕರು ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದರು.
ಸಿದ್ದರಾಮಯ್ಯ ಅವರಿಗೆ ಹೊಟ್ಟೆನೋವು ಹಾಗೂ ಜಠರ ಸಂಬಂಧಿತ ಸಮಸ್ಯೆ (ಗ್ಯಾಸ್ಟ್ರೋ ಇನ್ಫೆಕ್ಷನ್) ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರು ಸಂಜೆಯವರೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.
ಮುಖ್ಯಮಂತ್ರಿಯವರ ಆರೋಗ್ಯ ವಿಚಾರಿಸಿ ವಾಪಸ್ ಆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ,
“ತಂದೆಯವರ ಆರೋಗ್ಯ ಸ್ಥಿರವಾಗಿದೆ. ಗ್ಯಾಸ್ಟ್ರೋ ಇನ್ಫೆಕ್ಷನ್ನಿಂದ ಡೈರಿಯಾ ರೀತಿಯ ಸಮಸ್ಯೆ ಕಂಡುಬಂದಿದೆ. ವೈದ್ಯರು ಪರೀಕ್ಷೆ ನಡೆಸಿ ಅಗತ್ಯ ಔಷಧಿ ನೀಡಿದ್ದಾರೆ. ಅವರು ಈಗ ವಿಶ್ರಾಂತಿ ಪಡೆಯುತ್ತಿದ್ದು, ನಾಳೆ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.
