ಬೆಂಗಳೂರು: ಚುನಾವಣಾ ಅಕ್ರಮಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ನೇರ ಉತ್ತರ ನೀಡುವ ಬದಲು, ಹಳೆಯ ಸಮೀಕ್ಷೆಯೊಂದನ್ನು ಬಳಸಿ ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
Xನಲ್ಲಿ ಪ್ರಕಟಿಸಿದ ದೀರ್ಘ ಹೇಳಿಕೆಯಲ್ಲಿ, ರಾಜ್ಯದಲ್ಲಿ ವಿರೋಧ ಪಕ್ಷಗಳು ಹಾಗೂ ಕೆಲ ಮಾಧ್ಯಮಗಳು ಚುನಾವಣಾ ಆಯೋಗದ ಹೆಸರಿನಲ್ಲಿ ನಡೆಯಲಾದ ಸಮೀಕ್ಷೆಯನ್ನು ತಪ್ಪಾಗಿ ವ್ಯಾಖ್ಯಾನಿಸಿ, ರಾಹುಲ್ ಗಾಂಧಿ ಆರೋಪಗಳನ್ನು “ತಪ್ಪು” ಎಂದು ಬಿಂಬಿಸಲು ಯತ್ನಿಸುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.
ಈ ಸಮೀಕ್ಷೆ ಮೇ 2025ರಲ್ಲಿ ನಡೆದಿದ್ದು, ಅದು ಚುನಾವಣಾ ಆಯೋಗದ SVEEP (Systematic Voters’ Education and Electoral Participation) ಕಾರ್ಯಕ್ರಮದ ಭಾಗವಾಗಿತ್ತು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರ ಅದರ ಉದ್ದೇಶವಾಗಿತ್ತೇ ಹೊರತು, ರಾಹುಲ್ ಗಾಂಧಿ ಆರೋಪಿಸಿರುವ ಮತಗಳ್ಳತನ ಅಥವಾ ಚುನಾವಣಾ ಅಕ್ರಮಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸುವ ಸಮೀಕ್ಷೆ ಅಲ್ಲ ಎಂದು ಅವರು ತಿಳಿಸಿದ್ದಾರೆ. ಮತದಾರ ಜಾಗೃತಿಯ ಸಮೀಕ್ಷೆಯನ್ನು ಚುನಾವಣಾ ಅಕ್ರಮದ ಅಭಿಪ್ರಾಯ ಸಮೀಕ್ಷೆಯಂತೆ ಬಿಂಬಿಸುವುದು ಜನರನ್ನು ದಾರಿ ತಪ್ಪಿಸುವ ರಾಜಕೀಯ ಹುನ್ನಾರ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಮೀಕ್ಷೆಯ ಕಾಲಮಾನವನ್ನೇ ಗಮನಿಸಿದರೆ ಈ ವರದಿಗಳ ದುರುದ್ದೇಶ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಚುನಾವಣಾ ಅಕ್ರಮಗಳ ಕುರಿತು ಪುರಾವೆ ಸಹಿತ ಪತ್ರಿಕಾಗೋಷ್ಠಿ ನಡೆಸಿದ್ದು ಆಗಸ್ಟ್ 2025ರಲ್ಲಿ, ಅಂದರೆ ಸಮೀಕ್ಷೆಯಾದ ಮೂರು ತಿಂಗಳ ಬಳಿಕ. ಹಿಂದಿನ ಡೇಟಾವನ್ನು ಬಳಸಿ ನಂತರದ ಆರೋಪಗಳಿಗೆ ಜನಮನ್ನಣೆ ಇಲ್ಲ ಎಂದು ಹೇಳುವುದು ತರ್ಕಹೀನ ಮತ್ತು ಹಾಸ್ಯಾಸ್ಪದ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಮೀಕ್ಷೆಯ ಮಾದರಿ ಪ್ರಮಾಣವನ್ನೂ ಅವರು ಪ್ರಶ್ನಿಸಿದ್ದಾರೆ. ಸುಮಾರು 5.3 ಕೋಟಿ ಮತದಾರರಿರುವ ರಾಜ್ಯದಲ್ಲಿ ಕೇವಲ 5,100 ಜನರನ್ನು ಮಾತ್ರ ಸಮೀಕ್ಷೆಗೆ ಒಳಪಡಿಸಲಾಗಿದೆ, ಇದು 0.01% ಕ್ಕಿಂತಲೂ ಕಡಿಮೆ ಪ್ರತಿನಿಧಿತ್ವ ಎಂದು ಅವರು ಹೇಳಿದ್ದಾರೆ. ಇಷ್ಟು ಸಣ್ಣ ಮಾದರಿಯನ್ನು ಆಧರಿಸಿ ರಾಜ್ಯದ ಜನಾಭಿಪ್ರಾಯ ಎಂದು ಬಿಂಬಿಸುವುದು ಸಮಂಜಸವಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಸೆಂಟ್ರಲ್ನಂತಹ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ತಿರುಚಾಟದ ಗಂಭೀರ ಆರೋಪಗಳಿದ್ದರೂ, ಅಲ್ಲಿ ಸಮೀಕ್ಷೆಗೆ ಒಳಪಟ್ಟವರ ಸಂಖ್ಯೆ ಎರಡು ಅಂಕಿಯನ್ನೂ ದಾಟಿಲ್ಲ ಎಂದು ಅವರು ಉದಾಹರಣೆ ನೀಡಿದ್ದಾರೆ.
ಸಮೀಕ್ಷೆ ನಡೆಸಿದ ಸಂಸ್ಥೆಯ ಹಿನ್ನೆಲೆಯನ್ನೂ ಮಾಧ್ಯಮಗಳು ಪರಿಶೀಲಿಸಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ಸಮೀಕ್ಷೆಯನ್ನು ಡಾ. ಆರ್. ಬಾಲಸುಬ್ರಮಣ್ಯಂ ಸ್ಥಾಪಿಸಿದ GRAAM ಎಂಬ ಎನ್ಜಿಒ ನಡೆಸಿದ್ದು, ಅದರ ಸ್ಥಾಪಕರು ಪ್ರಸ್ತುತ ಕೇಂದ್ರ ಸರ್ಕಾರ ನೇಮಿಸಿರುವ ಹುದ್ದೆಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಅವರು ಬರೆದಿರುವ ಪುಸ್ತಕವನ್ನು ಗಮನಿಸಿದರೆ, ಇಂತಹ ವ್ಯಕ್ತಿಗಳು ನಡೆಸಿದ ಸಮೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳು ಸಹಜವಾಗಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಪ್ರಕಟವಾದ ಕೆಲ ವರದಿಗಳು ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿ ಆರೋಪದಲ್ಲಿ ಹುರುಳಿಲ್ಲ ಎಂಬ ಭಾವನೆ ಮೂಡಿಸಲು ಯತ್ನಿಸಿರುವುದು ಅತ್ಯಂತ ವಿಷಾದನೀಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವವನ್ನಾಗಲಿ ಅಥವಾ ಚುನಾವಣೆಯನ್ನಾಗಲಿ ಪ್ರಶ್ನಿಸಿಲ್ಲ; ಬದಲಾಗಿ ಮತದಾರರ ಪಟ್ಟಿಯ ಪಾರದರ್ಶಕತೆ, ಮತಗಟ್ಟೆಗಳ ಸಿಸಿಟಿವಿ ದೃಶ್ಯಗಳು, ಇವಿಎಂ ಕಾರ್ಯವೈಖರಿ ಮತ್ತು ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಈ ಯಾವುದೇ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಸಮರ್ಪಕ ಉತ್ತರ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮತಗಳ್ಳತನ ಕೇವಲ ಘೋಷಣೆಯಲ್ಲ, ಅದು ಆರೋಪಪಟ್ಟಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆಲಂದ ಕ್ಷೇತ್ರದಲ್ಲಿ ಸುಮಾರು 5,994 ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಲು ಪ್ರಯತ್ನಿಸಿದ ಪ್ರಕರಣದಲ್ಲಿ, ಎಸ್ಐಟಿ ತನಿಖೆಯ ನಂತರ 22,000 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಬಿಜೆಪಿಯ ಮಾಜಿ ಶಾಸಕರೂ ಸೇರಿದಂತೆ ಏಳು ಮಂದಿ ಆರೋಪಿಗಳಾಗಿದ್ದಾರೆ ಎಂದು ಅವರು ನೆನಪಿಸಿದ್ದಾರೆ. ಕಾಂಗ್ರೆಸ್ ಆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೂ, ರಾಜ್ಯ ಸರ್ಕಾರ ಎಸ್ಐಟಿ ತನಿಖೆಯನ್ನು ನಡೆಸಿದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಚುನಾವಣಾ ಆಯೋಗ ದುರುದ್ದೇಶದಿಂದ ಸಂಶಯಾಸ್ಪದ ಸಂಸ್ಥೆಯ ಮೂಲಕ ನಡೆಸಿದ ದೋಷಪೂರಿತ ಸಮೀಕ್ಷೆಯನ್ನು ಆಧಾರವಾಗಿಸಿಕೊಂಡು, ನಂತರದ ದಿನಗಳಲ್ಲಿ ರಾಹುಲ್ ಗಾಂಧಿ ಎತ್ತಿದ ಆರೋಪಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಮೀಕ್ಷೆಯ ಒಳಹೊರಗನ್ನು ಸೂಕ್ಷ್ಮವಾಗಿ ಪರಿಶೀಲಿಸದೇ, ಅದರ ಗುಪ್ತ ಅಜೆಂಡಾವನ್ನು ಅರ್ಥಮಾಡಿಕೊಳ್ಳದೇ, ಆಯ್ದ ಭಾಗಗಳನ್ನು ಮಾತ್ರ ಉಲ್ಲೇಖಿಸಿ ವರದಿ ಮಾಡಿದ ಮಾಧ್ಯಮಗಳ ನಡೆ ಅತ್ಯಂತ ದುರದೃಷ್ಟಕರ ಎಂದು ಅವರು ಕಿಡಿಕಾರಿದ್ದಾರೆ.
