ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ಮನವಿ
ಬೆಂಗಳೂರು:
ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ಆರು ಸಚಿವರು, ನ್ಯಾಯಾಲಯದ ಮೊರೆ ಹೋಗಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಪ್ರಕರಣ ಬಯಲಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ತಮ್ಮ ವಿರುದ್ಧ ಮಾನಹಾನಿಕಾರಿ ಸುದ್ದಿಯನ್ನು ನಿರ್ಬಂಧಿಸುವಂತೆ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ. ಸಿ. ಪಾಟೀಲ್, ಕ್ರೀಡಾ ಸಚಿವ ನಾರಾಯಣಗೌಡ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಾಲಯ, ಇಂದು ಆದೇಶ ನೀಡುವ ಸಾಧ್ಯತೆಯಿದೆ. ಕೋರ್ಟ್ ಮೊರೆ ಹೋಗಿರುವ ಆರು ಸಚಿವರ ನಡೆ ತೀವ್ರ ಕುತೂಹಲ ಕೆರಳಿಸಿದೆ.
ರಾಜ್ಯದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸುತ್ತಿರುವ ಸಚಿವರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ತೇಜೋವಧೆ ಮಾಡುವ ರಾಜಕೀಯ ಷಡ್ಯಂತ್ರ ನಡೆಯುತ್ತಿರುವ ಗುಮಾನಿ ಇದೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಪರಿಸ್ಥಿತಿ ಇರುವುದು ಸುಳ್ಳಲ್ಲ. (1/3)
— Dr Sudhakar K (@mla_sudhakar) March 5, 2021
ಸತ್ಯ ಹೊಸಲು ದಾಟುವುದರೊಳಗೆ, ಸುಳ್ಳು ಊರೆಲ್ಲಾ ಸುತ್ತಾಡಿಕೊಂಡು ಬಂದಿರುತ್ತದೆ ಎಂಬಂತೆ, ಜೀವಮಾನವಿಡೀ ಗಳಿಸಿರುವ ಒಳ್ಳೆಯ ಹೆಸರು, ಯಾರದೋ ಷಡ್ಯಂತ್ರದಿಂದ ಕ್ಷಣಮಾತ್ರದಲ್ಲಿ ನಶಿಸಿ ಹೋಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆಯಿಂದ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೇವಿ. (2/3)
— Dr Sudhakar K (@mla_sudhakar) March 5, 2021
ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ರೀತಿಯ ಸವಾಲುಗಳು ಸಾಮಾನ್ಯ. ಆದರೆ ನಮ್ಮ ವಿರುದ್ಧ ಷಡ್ಯಂತ್ರಗಳು ನಡೆದಾಗ ಇಂತಹ ದುಷ್ಟ ಶಕ್ತಿಗಳನ್ನು ಎದುರಿಸುವುದೂ ಅನಿವಾರ್ಯ. ನಮ್ಮ ಆತ್ಮಸಾಕ್ಷಿ ಸರಿ ಇರುವವರೆಗೂ, ಜನರ ಆಶೀರ್ವಾದ ಇರುವವರೆಗೂ ಯಾವ ಷಡ್ಯಂತ್ರವೂ ಯಶಸ್ವಿಯಾಗುವುದಿಲ್ಲ. ನಮ್ಮ ನ್ಯಾಯವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸವಿದೆ. (3/3)
— Dr Sudhakar K (@mla_sudhakar) March 5, 2021