ಬೆಂಗಳೂರು: ಶ್ವಾಸಕೋಶ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಸಚಿವರಾದ ಎಸ್.ಎಂ.ಕೃಷ್ಣ ಅವರ ಆರೋಗ್ಯ ಸುಧಾರಿಸಿದ್ದು ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮರಳಿ ಮನೆಗೆ ಆಗಮಿಸಿದ್ದಾರೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.
ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಶ್ವಾಸಕೋಶದ ಸೊಂಕು ನಿವಾರಣೆ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿರುವುದಾಗಿ ಮಣಿಪಾಲ ಆಸ್ಪತ್ರೆ ವೈದ್ಯರು ತಿಳಿಸಿದ್ದು, ಭಗವಂತನ ಕೃಪೆ ಮತ್ತು ವೈದ್ಯರ ಪರಿಶ್ರಮದಿಂದ ಎಸ್.ಎಂ.ಕೃಷ್ಣ ಅವರು ಗುಣಮುಖರಾಗಿದ್ದಾರೆ. ಆದರೆ ಎರಡು ವಾರಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದು ಯಾವುದೆ ಸಾರ್ವಜನಿಕ ಭೇಟಿ ಮತ್ತು ಕಾರ್ಯಕ್ರಮಗಳಿಗೆ ಪಾಲ್ಗೊಳ್ಳದಂತೆ ವೈದ್ಯರು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ಹಿತೈಷಿಗಳು, ಅಭಿಮಾನಿಗಳು ಕೆಲವು ದಿನಗಳ ಕಾಲ ಅವರನ್ನು ಭೇಟಿ ಮಾಡದಂತೆ ಕುಟುಂಬ ವರ್ಗದವರಿಗೆ ವೈದ್ಯರು ತಿಳಿಸಿದ್ದು ಹೀಗಾಗಿ ಯಾರೂ ಸಹ ಅನ್ಯತಃ ಭಾವಿಸದೇ ಹಿರಿಯ ಮುತ್ಸುದ್ದಿಎಸ್.ಎಂ.ಕೃಷ್ಣ. ಅವರು ವಿಶ್ರಾಂತಿ ಪಡೆಯಲು ಸಹಕರಿಸಬೇಕಾಗಿದೆ ಹಾಗೂ ಸಂಪೂರ್ಣವಾಗಿ ಗುಣಮುಖರಾದ ನಂತರ ಎಸ್.ಎಂ.ಕೃಷ್ಣ ಅವರೇ ಎಲ್ಲರನ್ನೂ ಭೇಟಿ ಮಾಡಲಿದ್ದಾರೆ.
ಚಿಕಿತ್ಸೆ ನೀಡಿದ ಮಣಿಪಾಲ ವೈದ್ಯರ ತಂಡ ಹಾಗೂ ಸಿಬ್ಬಂದಿಗೆ ಎಸ್.ಎಂ.ಕೃಷ್ಣ ಅವರು ಧನ್ಯವಾದ ತಿಳಿಸಿದ್ದಾರೆ ಎಂದು ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.