Home ರಾಜಕೀಯ ಸಿಡಿ ಸರ್ಕಾರದಿಂದ ಅಕ್ರಮ ಮುಚ್ಚಿಕೊಳ್ಳಲು ಡ್ರಾಮಾ: ಡಿ.ಕೆ ಸುರೇಶ್

ಸಿಡಿ ಸರ್ಕಾರದಿಂದ ಅಕ್ರಮ ಮುಚ್ಚಿಕೊಳ್ಳಲು ಡ್ರಾಮಾ: ಡಿ.ಕೆ ಸುರೇಶ್

25
0

ಬೆಂಗಳೂರು:

‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿಡಿ ಸರ್ಕಾರವು, ತನ್ನ ಅಕ್ರಮ ಚಟುವಟಿಕೆಗಳ ಸಿಡಿಗಳನ್ನು ರಕ್ಷಿಸಿಕೊಳ್ಳಲು ಡ್ರಾಮಾ ಮಾಡುತ್ತಿದ್ದು, ರಾಜ್ಯದ ಜನರ ಸಮಸ್ಯೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, ಹೇಳಿದ್ದಿಷ್ಟು:

‘ಎಸ್ ಐಟಿ ಏನು ವಿಚಾರಣೆ ಮಾಡುತ್ತದೆ ಎಂಬುದು ಆರೋಪಿಗೆ ತಿಳಿಯುತ್ತದೆ. ಆ ಮೇಲೆ ಆತ ಪತ್ರಿಕಾಗೋಷ್ಠಿ ನಡೆಸುತ್ತಾನೆ. ಇದು ಸಿಡಿ ಸರ್ಕಾರದ ಪ್ರಾಸ್ತಾವಿಕ ಡ್ರಾಮಾ. ಮಗಳ ವಯಸ್ಸಿನ ಹೆಣ್ಣಿಗೆ ಆದ ನೋವಿನ ಬಗ್ಗೆ ಸರ್ಕಾರ, ಮಾಧ್ಯಮಗಳು, ಎಸ್ ಐಟಿ ಚರ್ಚೆಯನ್ನೂ ಮಾಡುತ್ತಿಲ್ಲ. ಬೇರೆ ಯಾರಾದರೂ ಈ ರೀತಿ ಸ್ವಲ್ಪ ಮಾಡಿದ್ದರೂ, ಜೈಲಿಗೆ ಹಾಕುತ್ತಿದ್ದರು.

ಈ ಸಿಡಿ ಸರ್ಕಾರ ಅಭಿವೃದ್ಧಿ ಬಗ್ಗೆ, ಕೊರೋನಾ ಬಗ್ಗೆ, ರಾಜ್ಯದಲ್ಲಿ ಬರದಿಂದ ನೀರಿಗೆ ಹಾಹಾಕಾರದ ಬಗ್ಗೆ ಚಿಂತಿಸುತ್ತಿಲ್ಲ. ಇವರ ಚಿಂತನೆ ಸಿಡಿ ರಕ್ಷಿಸಿಕೊಂಡು, ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಚ್ಚಿಕೊಂಡು ಹೋಗಲು ಚಿಂತಿಸುತ್ತಿದೆ ಇದು ಮಾಧ್ಯಮಗಳ ಮೂಲಕ ರಾಜ್ಯದ ಜನತೆಗೆ ಸಿಗುತ್ತಿದೆ.

ಸಂತ್ರಸ್ತ ಯುವತಿಯನ್ನು ಡಿ.ಕೆ ಶಿವಕುಮಾರ್ ಅವರು ನಿಯಂತ್ರಿಸುತ್ತಿದ್ದಾರೋ, ಎಸ್ ಐಟಿ ನಿಯಂತ್ರಿಸುತ್ತಿದೆಯೋ ನನಗೆ ಗೊತ್ತಿಲ್ಲ.

ಈ ಎಸ್ ಐಟಿಗೆ ಫ್ರೇಮ್ ವರ್ಕ್ ಎಂಬುದೇ ಇಲ್ಲ. ಯುವತಿ ಹೇಳಿಕೆ ಆಧಾರದ ಮೇಲೆ ಇದುವರೆಗೂ ವಿಚಾರಣೆ ನಡೆಯುತ್ತಿಲ್ಲ. ಯುವತಿ ದೂರಿನ ಮೇಲೆ ಪ್ರಕರಣ ದಾಖಲು ಅಂತಾರೆ. ಆದರೆ ಆರೋಪಿಗೆ ಪೊಲೀಸರ ಸೆಕ್ಷನ್ ಹಾಕಿದ್ದಾರೆ, ಆದರೆ ವಿಚಾರಣೆ ನಡೆಯುತ್ತಿಲ್ಲ. ಇದು ಪ್ರಕರಣ ಮುಚ್ಚಿಹಾಕುವ ಕುತಂತ್ರವೇ ಹೊರತು ಬೇರೇನೂ ಅಲ್ಲ.

ರಾಷ್ಟ್ರೀಯ ಪಕ್ಷವಾಗಿ, ಸಂಸ್ಕೃತಿ ಬಗ್ಗೆ ಮಾತನಾಡುವ ಪಕ್ಷವಾಗಿ ಈ ರೀತಿ ಮಾಡುತ್ತಿರುವುದು ನೋಡಿದರೆ, ಇದು ಸಿಡಿಯಿಂದ ಉಳಿದುಕೊಂಡಿರುವ ಸರ್ಕಾರವೇ ಹೊರತು ಬೇರೇನೂ ಅಲ್ಲ.

ಇಡೀ ಪ್ರಕರಣ ಮುಚ್ಚಿಹಾಕಲು ಡಿ.ಕೆ. ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನಾವು ಯುವತಿಯ ರಕ್ಷಣೆಗೆ ನಿಲ್ಲಬೇಕಾಗುತ್ತದೆ. ಇದರ ಬಗ್ಗೆ ನಮ್ಮ ನಾಯಕರ ಜತೆ ಚರ್ಚಿಸಿ ಹೊರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಗೃಹಸಚಿವರು ಕೈಚೆಲ್ಲಿ ಕೂತಿದ್ದಾರೆ. ಹೀಗಾಗಿ ನೀವು ಅತ್ಯಾಚಾರವನ್ನಾದರೂ ಮಾಡಬಹುದು, ದೂರು ಕೊಟ್ಟರೆ ಅದನ್ನು ದಾಖಲಿಸಿ ಇಟ್ಟುಕೊಳ್ಳುತ್ತೇವೆ. ಹೋಗಕ್ಕೆ ಬರಕ್ಕೆ ಪೊಲೀಸ್ ರಕ್ಷಣೆ ನೀಡುತ್ತೇವೆ ಎನ್ನುವಂತಾಗಿದೆ. ಈ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬಂತಾಗಿದೆ

ಎದುರಿಗೆ ಸಿಕ್ಕಾಗ ಏನು ಹೇಳಬೇಕೋ ಹೇಳ್ತೀನಿ:

ರಮೇಶ್ ಜಾರಕಿಹೊಳಿ ಅವರು ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಅವಾಚ್ಯ ಶಬ್ದ ಬಳಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಆ ಯಪ್ಪ ಎದುರಿಗೆ ಸಿಕ್ಕಾಗ ಏನು ಹೇಳಬೇಕೋ ಹೇಳುತ್ತೇನೆ. ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಅವರಿಗಿಂತ ಹತ್ತರಷ್ಟು ಮಾತನಾಡಲು ನನಗೂ ಬರುತ್ತದೆ. ಕನಕಪುರಕ್ಕೆ ಬಂದಾಗ ನೋಡಿಕೊಳ್ಳುತ್ತೇವೆ. ಕನಕಪುರಕ್ಕಾದರೂ ಬರಲಿ, ಬೆಂಗಳೂರಿಗಾದರೂ ಬರಲಿ. ಬಂದಾಗ ನೋಡೋಣ. ಯುವತಿ ಹೇಳಿಕೆ ಹಿಂದೆ ಸರ್ಕಾರ, ಪೊಲೀಸ್ ಇಲಾಖೆ ಇರುವುದು ಎದ್ದು ಕಾಣಿಸುತ್ತಿದೆ.

ಈ ಸರ್ಕಾರ ನಿಯಂತ್ರಿಸುತ್ತಿರೋರು ಯಾರು? ಅವರೇ ಹೇಳಿದ್ದಾರೆ, ಈ ಸರ್ಕಾರ ಉಳಿಸೋರು ನಾವು, ತೆಗೆಯೋರು ನಾವು ಅಂತಾ ಅವರೇ ಹೇಳಿದ್ದಾರೆ. ಹೀಗಿರುವಾಗ ಬೇರೆ ಯಾರ ಬಳಿ ರಕ್ಷಣೆ ಕೇಳುತ್ತೀರಿ? ಸರ್ಕಾರವನ್ನು ಇವರ ಕೈಗೊಂಬೆಯಾಗಿ ಆಟವಾಡಿಸುತ್ತಿದ್ದಾರೆ.

ಅವರಿಗೆ ದೇವರು ಒಳ್ಳೆಯದು ಮಾಡಲಿ. ನನಗೆ ಬೇಜಾರು ಏನಂದ್ರೆ ರಾಜ್ಯದ ಜನರಿಗೆ ಎರಡು ತೋರಿಸುತ್ತಿದ್ದೀರಿ. ಒಂದು ಬಟ್ಟೆ ಹಾಕಿರೋದು, ಮತ್ತೊಂದ್ದು ಬಟ್ಟೆ ಬಿಚ್ಚಿರೋದು ತೋರಿಸುತ್ತಿದ್ದೀರಿ. ಆ ಬಟ್ಟೆ ಬಿಚ್ಚಿದ ವ್ಯಕ್ತಿ ಮನೆಮುಂದೆ ಹೋಗಿ ನಿಂತು ಕೇಳುತ್ತೀರಲ್ಲಾ ಅದೇ ಬೇಜಾರು. ಅವರನ್ನು ಹುಡುಕಿಕೊಂಡು ಹೋಗಿ ತೋರಿಸುತ್ತೀರಲ್ಲಾ ಅದೇ ಬೇಜಾರು.

ಎಲ್ಲವನ್ನೂ ಎಡಿಟ್ ಅಂತೀರಿ. ನೀವು ಮಾಧ್ಯಮಗಳು ನಾನು ಮಾತನಾಡುವುದನ್ನು ಎಡಿಟ್ ಮಾಡುತ್ತೀರಿ. ಹಾಗೆಂದ ಮಾತ್ರಕ್ಕೆ ನಾನು ಮಾತನಾಡಿರುವುದು ನಕಲಿ ಆಗುತ್ತಾ? ನನ್ನ ಮಾತು, ಹಾವಾ ಭಾವವನ್ನು ನಕಲಿ ಎನ್ನಲು ಸಾಧ್ಯವೇ? ಆ ಮಟ್ಟಿಗೆ ತಂತ್ರಜ್ಞಾನ ಬಂದಿದೆಯೇ? ಮಾಧ್ಯಮಗಳಿಗೇ ಗೊತ್ತಿರಬೇಕು.

ನಿಮ್ಮ ಕೇಲಸ ನೀವು ಮಾಡ್ತೀರಿ, ರಾಜಕೀಯದವರ ಕೆಲಸ ರಾಜಕೀಯದವರು ಮಾಡ್ತಾರೆ:
ಷಡ್ಯಂತ್ರ ಅಂತಾ ಹೇಳುತ್ತೀರಾ? ನಾನು ನೀವು ಹೋಗಿ ಅವರ ಬಟ್ಟೆ ಬಿಚ್ಚಿದ್ವಾ? ಇಲ್ಲ, ಶಿವಕುಮಾರ್ ಅವರು ಹೋಗಿ ಬಟ್ಟೆ ಬಿಚ್ಚಿದ್ರಾ? ಷಡ್ಯಂತ್ರ ಆಗಿದ್ದು ಇಡೀ ಜಗತ್ತಿಗೆ ಗೊತ್ತಿದೆ. ಕಷ್ಟ ಅಂತಾ ನನ್ನ ಬಳಿನೂ ಸಾಕಷ್ಟು ಜನ ಬರ್ತಾರೆ. ಅವರಿಗೆ ಸಹಾಯ ಮಾಡೋದು ನಮ್ಮ ಧರ್ಮ. ಯಾರೋ ಸಂತ್ರಸ್ತೆ ಬಂದು ತೊಂದರೆ ಆಗಿದೆ ಅಂತಾ ನಿಮ್ಮ ಮಾಧ್ಯಮದ ಮುಂದೆ ಬಂದ್ರೆ, ನೀವು ಎಳೆಎಳೆಯಾಗಿ ಎಲ್ಲ ಮಾಹಿತಿ ಬಿಚ್ಚುತ್ತೀರಿ. ಅದು ನಿಮ್ಮ ತಪ್ಪು ಎಂದು ಹೇಳಲು ಸಾಧ್ಯವೇ? ನೀವು ಮಾಡ್ತೀರೋ ಇಲ್ವೋ? ನಿಮ್ಮ ಕೆಲಸ ನೀವು ಮಾಡ್ತೀರಿ, ರಾಜಕೀಯದವರ ಕೆಲಸ ರಾಜಕೀಯದವರು ಮಾಡ್ತಾರೆ.

ಅವರು ಕನಕಪುರಕ್ಕೆ ಬಂದರೆ ನಾವ್ಯಾರು ಸ್ವಾಗತ ಮಾಡಲ್ಲ. ನಮ್ಮ ಊರಿನಲ್ಲಿರುವವರು ಸ್ವಾಗತ ಮಾಡ್ತಾರೆ.

LEAVE A REPLY

Please enter your comment!
Please enter your name here