ಬೆಂಗಳೂರು:
ಮರಾಠ ಪ್ರಾಧಿಕಾರ ರಚನೆಗೆ ಸರ್ಕಾರದ ಆದೇಶ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಬಲವಂತದಿಂದ ಬಂದ್ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮಹಾಜನ್ ತೀರ್ಪು ಅಂತಿಮ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ, ಮರಾಠಿಗರು ಸಹ ನಮ್ಮ ರಾಜ್ಯದ ಕನ್ನಡಿಗರೇ. ಇದು ಮರಾಠಾ ಅಭಿವೃದ್ಧಿಗಾಗಿ ಮಾಡಿರುವ ಪ್ರಾಧಿಕಾರ. ಮರಾಠಿಗರು ಕೂಡ ಕಟ್ಟಾ ಹಿಂದುತ್ವ ವಾದಿಗಳು. ಬೆಳಗಾವಿಯ ವಿಶ್ವಸಮ್ಮೇಳನದಲ್ಲೂ ಅವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡಿ.5 ರಂದು ಬಂದ್ ಮಾಡುವ ಅಗತ್ಯವೇನಿಲ್ಲ. ಬಂದ್ ಗೆ ಕರೆ ನೀಡಿ, ಜನರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಹೇಳಿದರು.
ಸರ್ಕಾರ ಮರಾಠಾ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುತ್ತಿದೆಯೇ ವಿನಃ ಬೇರೆ ಯಾವುದೋ ಕಾರಣಕ್ಕಾಗಿ ಅಲ್ಲ. ಬಲವಂತದಿಂದ ಬಂದ್ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ಖ್ಯಾತೆ ತೆಗೆದು ಜನರಲ್ಲಿ ಗೊಂದಲ ಸೃಷ್ಟಿಸುವುದನ್ನು ಖಂಡಿಸುವುದಾಗಿ ಹೇಳಿದ ಯಡಿಯೂರಪ್ಪ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಆಡಿರುವುದು ಉದ್ದಟತನದ ಮಾತು. ಬೆಳಗಾವಿ ಎಂದೆಂದೂ ಕರ್ನಾಟಕದ್ದೇ. ಅವರು ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಮರಾಠ ಅಭಿವೃದ್ದಿ ನಿಗಮ ಮಾಡಿರುವ ಉದ್ದೇಶ ಅರ್ಥಮಾಡಿಕೊಳ್ಳಬೇಕು. ಮರಾಠರು ಕರ್ನಾಟಕದಲ್ಲೇ ಇರುವವರು ಹಿಂದುತ್ವವಾದಿಗಳು ಹಾಗಾಗಿ ಮರಾಠ ಅಭಿವೃದ್ದಿ ನಿಗಮ ಮಾಡಿದ್ದೇವೆ. ಈ ಬಾರಿ ಬೆಂಗಳೂರಿನಲ್ಲೇ ವಿಧಾನಸಭಾ ಅಧಿವೇಶನ ನಡೆಸಲಾಗುತ್ತದೆ. ಬೆಳಗಾವಿಯಲ್ಲಿ ಅಧಿವೇಶನವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾವಿಂದು ದೆಹಲಿಗೆ ಭೇಟಿ ನೀಡುತ್ತಿದ್ದು, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು. ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದು ದೆಹಲಿಗೆ ಹೋದ ಬಳಿಕ ಗೊತ್ತಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.