ಬೆಂಗಳೂರು:
ಪ್ರಕರಣವೊಂದರಲ್ಲಿ ಎಫ್ಐಆರ್ ದಾಖಲಿಸಲು ದೂರುದಾರರಿಂದ 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಮುಖ್ಯ ಪೇದೆಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮಂಗಳವಾರ ಬಂಧಿಸಿದೆ.
ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸೌಮ್ಯ, ಮುಖ್ಯ ಪೇದೆ ಜೆ.ಪಿ. ರೆಡ್ಡಿ ಬಂಧಿತ ಆರೋಪಿಗಳು.
ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲೇ ಲಂಚದ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದಾರೆ.
ಎಸಿಬಿ ಕಾರ್ಯಾಚರಣೆ ವೇಳೆ ಠಾಣೆಯಲ್ಲಿದ್ದ ಮತ್ತೋರ್ವ ಪೇದೆ ಪರಾರಿಯಾಗಲು ಯತ್ನಿಸಿ ಜಾರಿ ಬಿದ್ದಿದ್ದು, ಅವರ ಕಾಲಿನ ಮೂಳೆ ಮುರಿದಿದೆ. ಸದ್ಯ ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. UNI