ಬೆಂಗಳೂರು:
ಸಕಾಲ ಯೋಜನೆಯ ಹೆಮ್ಮೆಯ ಕಾರ್ಯಕ್ರಮವಾದ ‘ಜನಸೇವಕ’ ಕಾರ್ಯಕ್ರಮವನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಯಶವಂತಪುರ ಕ್ಷೇತ್ರದ ಉಳ್ಳಾಲ ವಾರ್ಡ್‍ನಲ್ಲಿ ದಲ್ಲಿ ಯೋಜನೆಗೆ ಚಾಲನೆ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಶ್ರೀ ಎಸ್. ಸುರೇಶ್ ಕುಮಾರ್, ಸಾರ್ವಜನಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ತಲುಪಿಸುವುದು ಯೋಜನೆಯ ಉದ್ದೇಶವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ಯೋಜನೆಯನ್ನು ರಾಜಧಾನಿ ಬೆಂಗಳೂರಿನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿಸಲಾಗಿದ್ದು, ನಂತರ ರಾಜ್ಯದ ಇತರೆಡೆಗಳಲ್ಲಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಈ ಯೋಜನೆ ಹಿರಿಯ ನಾಗರೀಕರು ಸೇರಿದಂತೆ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯುವುದು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿ ಮನೆ ಬಾಗಿಲಿಗೆ ಈ ಯೋಜನೆಯ ಸೇವೆಗಳು ತಲುಪಲಿವೆ ಎಂದು ಸುರೇಶ್ ಕುಮಾರ್ ಹೇಳಿದರು.
ಕ್ಷೇತ್ರದ ಶಾಸಕರೂ ಆದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಯೋಜನೆಗೆ ಚಾಲನೆ ನೀಡಿದ ಸಚಿವದ್ವಯರು ಸಾಂಕೇತಿಕವಾಗಿ ಯಶವಂತಪುರ ಕ್ಷೇತ್ರದ ಮೂವರು ಫಲಾನುಭವಿಗಳ ಮನೆಗೆ ಹೋಗಿ ಅವರು ಕೋರಿದ್ದ ಸೇವೆಗಳ ದಾಖಲಾತಿಗಳನ್ನು ನೀಡಿದರು.
ನಾಗರಿಕರ ಮನೆ ಬಾಗಿಲಿಗೆ ಅವರಿಗೆ ಅಗತ್ಯವಾದ ಸೇವೆಗಳನ್ನು ಪೂರೈಸುವ ನಮ್ಮ ಹೆಮ್ಮೆಯ ಜನಸೇವಕ ಕಾರ್ಯಕ್ರಮ ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳ ಗ್ರಾಮದ ಬಳಿ ಪ್ರಾರಂಭವಾಯಿತು. ರಾಜ್ಯದ ಸಹಕಾರ ಸಚಿವರು ಸ್ಥಳೀಯ ಶಾಸಕರು ಆದ ಶ್ರೀ ಎಸ್ ಟಿ ಸೋಮಶೇಖರ್ ಅವರು ಉಪಸ್ಥಿತರಿದ್ದರು.
— S.Suresh Kumar, Minister – Govt of Karnataka (@nimmasuresh) February 19, 2021
ಸಕಾಲ ಯೋಜನೆ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಹಾಜರಿದ್ದರು.
ಜನಸೇವಕ ಯೋಜನೆ ರಾಜಾಜಿನಗರ, ಮಹದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಅನುಷ್ಠಾನಗೊಂಡಿದೆ.