Home ಶಿಕ್ಷಣ ಶಾಲೆಗಳಲ್ಲಿ ಕೋವಿಡ್ ನಿಯಮ ಪಾಲಿಸಿ: ಸುರೇಶ್ ಕುಮಾರ್

ಶಾಲೆಗಳಲ್ಲಿ ಕೋವಿಡ್ ನಿಯಮ ಪಾಲಿಸಿ: ಸುರೇಶ್ ಕುಮಾರ್

54
0

ಬೆಂಗಳೂರು:

ಇದೇ 22ರಿಂದ 6 ರಿಂದ 8ನೇ ತರಗತಿಗಳ ಆರಂಭವಾಗುತ್ತಿರುವುದರಿಂದ ಮಕ್ಕಳ ಸಂಖ್ಯೆ ಶಾಲೆಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.

6ರಿಂದ 8ನೇ ತರಗತಿಗಳ ಆರಂಭಕ್ಕೆ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಇಂದು ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆಯಲ್ಲಿ ವಿವರಿಸಿರುವ ಅಂಶಗಳು ಹಾಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

Screenshot 150

ಬಿಬಿಎಂಪಿ ವ್ಯಾಪ್ತಿ ಮತ್ತು ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ಶಾಲೆಗಳು ಸೇರಿದಂತೆ ರಾಜ್ಯದೆಲ್ಲೆಡೆ 6ರಿಂದ 12ನೇ ತರಗತಿಗಳು ಪೂರ್ಣಾವಧಿಯಲ್ಲಿ ನಡೆಯಲಿವೆ. ಬಿಬಿಎಂಪಿ ಮತ್ತು ಕೇರಳ ಗಡಿಯ ಶಾಲೆಗಳಲ್ಲಿ 6 ಮತು 7ನೇ ತರಗತಿಗಳಿಗೆ ಎಂದಿನಂತೆ ಪರಿಷ್ಕೃತ ವಿದ್ಯಾಗಮ ತರಗತಿಗಳು ನಡೆಯಲಿವೆ.

6ರಿಂದ ಮೇಲಿನ ತರಗತಿಗಳ ವಿದ್ಯಾರ್ಥಿಗಳು ಮನೆಯಿಂದ ಮಧ್ಯಾಹ್ನದ ಊಟ ತರಬಹುದಾಗಿದೆ. ಸಾಮಾಜಿಕ ಅಂತರ ಮತ್ತು ಶುಚಿತ್ವ ಕಾಪಾಡುವುದು ಮತ್ತು ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

Screenshot 151

ಸುತ್ತೋಲೆಯಲ್ಲಿ ವಾರದ ಐದು ದಿನಗಳು 6ರಿಂದ ಮೇಲಿನ ತರಗತಿಗಳು ಬೆಳಗ್ಗೆ 10ರಿಂದ 4.30ರವರೆಗೆ ಮತ್ತು ಶನಿವಾರ ಬೆಳಗ್ಗೆ 10.30ರಿಂದ 12.30ರವರೆಗೆ ನಡೆಯಲಿವೆ ಎಂದು ಸಲಹಾತ್ಮಕ ವೇಳಾಪಟ್ಟಿ ನಿಗದಿಪಡಿಲಾಗಿದೆ. ಬಿಬಿಎಂಪಿ ಮತ್ತು ಕೇರಳ ಗಡಿ ಭಾಗದ ಶಾಲೆಗಳಲ್ಲಿ 6 ಮತ್ತು 7ನೇ ತರಗತಿಗಳ ವಿದ್ಯಾಗಮ ಕಾರ್ಯಕ್ರಮಗಳು ವಾರದಲ್ಲಿ ಪ್ರತ್ಯೇಕ ಮೂರು ದಿನಗಳ ಕಾಲ ನಡೆಯಲಿವೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳ ಆಯ್ದ ಶಾಲೆಗಳು ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಆರೋಗ್ಯ ಇಲಾಖೆ ವಿದ್ಯಾರ್ಥಿಗಳ ಯಾದೃಚ್ಛಿಕ (ರ‍್ಯಾಂಡಮ್) ಪರೀಕ್ಷೆ ನಡೆಸಲಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಶಾಲೆಗೆ ಬರಲು ಅನುಮತಿ ಪತ್ರ ತರಬೇಕಿದ್ದು, ಪೋಷಕರು ತಮ್ಮ ಪುತ್ರ/ಪುತ್ರಿ ಕೋವಿಡ್ ಲಕ್ಷಣಗಳಿಂದ ಮುಕ್ತವಾಗಿದ್ದಾರೆಂದು ಎಂದು ಅದರಲ್ಲಿ ತಿಳಿಸುವುದು ಕಡ್ಡಾಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Screenshot 152

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿನಿಲಯಗಳು ಹಾಗೂ ಇತರೆ ವಸತಿ ನಿಲಯಗಳ ವಿದ್ಯಾರ್ಥಿಗಳ ಪಾಲನೆಗಾಗಿ ಆರೋಗ್ಯ ಇಲಾಖೆ ನಿಗದಿಪಡಿಸಿರುವ ಎಸ್‍ಒಪಿ ಅನುಸರಿಸಬೇಕಿದೆ. ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಆಯಾ ಶಾಲಾ ಹಂತದಲ್ಲಿ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆಗಳ ಆಧಾರದಲ್ಲಿ ಎಸ್‍ಒಪಿ ಪಾಲನೆಗಾಗಿ ಶಾಲಾ ವೇಳಾಪಟ್ಟಿ ಪರಿಷ್ಕರಿಸಿ ತರಗತಿಗಳನ್ನು ನಡೆಸಲೂ ಅವಕಾಶವಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here