Home ಶಿಕ್ಷಣ ಶಾಲಾ ಸಮಯಕ್ಕೆ ಬಸ್ ಸಂಚಾರಕ್ಕೆ ಸುರೇಶ್ ಕುಮಾರ್ ಮನವಿ

ಶಾಲಾ ಸಮಯಕ್ಕೆ ಬಸ್ ಸಂಚಾರಕ್ಕೆ ಸುರೇಶ್ ಕುಮಾರ್ ಮನವಿ

58
0

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಶಿಕ್ಷಣ ಸಚಿವರ ಪತ್ರ

ಬೆಂಗಳೂರು:

ರಾಜ್ಯದಲ್ಲಿ ಶಾಲಾ ಕಾಲೇಜುಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಶಾಲಾ ಸಮಯಕ್ಕೆ ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿಯವರಿಗೆ ಪತ್ರ ಬರೆದಿರುವ ಅವರು, ಸಾರಿಗೆ ನಿಗಮಗಳು ವಿದ್ಯಾರ್ಥಿಗಳಿಗೆ ರಿಯಾಯತಿ ಪಾಸುಗಳನ್ನು ಒದಗಿಸಿ ಅನುಕೂಲ ಮಾಡಿಕೊಟ್ಟಿವೆ. ಆದರೆ ಬಹುತೇಕ ಕಡೆಗಳಲ್ಲಿ ಸರ್ಕಾರಿ ಬಸ್ ಸೌಲಭ್ಯವನ್ನೇ ಅವಲಂಬಿಸಿರುವ ಆ ಮಕ್ಕಳು ಶಾಲೆಗಳಿಗೆ ಸರಿಯಾಗಿ ಹಾಜರಾಗುತ್ತಿಲ್ಲವೆಂಬುದು ಶಿಕ್ಷಣ ಇಲಾಖೆಯ ಅಧಿಕಾರಿಗಳ ವರದಿಯಲ್ಲಿ ವ್ಯಕ್ತವಾಗಿದ್ದು, ಶಾಲಾ ಸಮಯಕ್ಕೆ ಅನುಕೂಲವಾಗುವಂತೆ ಬಸ್ ಗಳು ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾವು-ನೀವೆಲ್ಲಾ ಸಭೆ ಸೇರಿ ಶಾಲೆಗಳನ್ನು ಆರಂಭಿಸುವ ತೀರ್ಮಾನ ಕೈಗೊಂಡಂತೆ ಶಾಲಾ ಕಾಲೇಜುಗಳು ತಡವಾಗಿ ಆರಂಭವಾಗಿದ್ದು, ಪ್ರಸ್ತುತ ಶಾಲೆಗಳು ಪೂರ್ಣ ಅವಧಿ ನಡೆಯುತ್ತಿವೆ. ಕೊರೋನಾ ಸೋಂಕಿನ ಮಧ್ಯೆಯೂ ಶಾಲೆಗಳಿಗೆ ಮಕ್ಕಳು ನಮ್ಮ ನಿರೀಕ್ಷೆಯನ್ನೂ ಮೀರಿ ಬರುತ್ತಿರುವುದು ಸಂತಸ ಸಂಗತಿಯಾಗಿದೆ. ಏತನ್ಮ್ಮಧ್ಯೆ ಸಾರಿಗೆ ನಿಗಮಗಳು ವಿದ್ಯಾರ್ಥಿಗಳಿಗೆ ರಿಯಾಯತಿ ಪಾಸುಗಳನ್ನು ಒದಗಿಸಿ ಅನುಕೂಲ ಮಾಡಿಕೊಟ್ಟಿವೆ. ಕೊರೋನಾ ಹಿನ್ನೆಲೆಯಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಸ್ ಕಾರ್ಯಾಚರಣೆಗೆ ಇಳಿಯದಿರುವುದರಿಂದ ಈ ಸಮಸ್ಯೆಯಾಗಿರಬಹುದು. ಬಸ್ ಗಳು ಸರಿಯಾದ ಸಮಯಕ್ಕೆ ಬಾರದೇ ಕೆಲವಡೆ ಮಕ್ಕಳು ಗಂಟೆಗಟ್ಟಲೇ ಕಾಯುತ್ತಿದ್ದಾರೆಂಬ ಮತ್ತು ಹಾಗೆಯೇ ಕಾದು ಕಾದು ಶಾಲೆಯ ಸಮಯ ಮೀರಿದ್ದರಿಂದ ಶಾಲೆಗೆ ಬಾರದೇ ಮನೆಯತ್ತಲೇ ಹೆಜ್ಜೆ ಹಾಕಿದ್ದಾರೆಂಬ ವರದಿಗಳೂ ಇವೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದ ಬಹುತೇಕ ಹಳ್ಳಿಗಳ ವಿದ್ಯಾರ್ಥಿಗಳು ತಾಲೂಕು ಕೇಂದ್ರಗಳಿಗೆ, ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಗಳ ಶಾಲಾ ಕಾಲೇಜುಗಳಿಗೆ ಹೋಗಿಬರಬೇಕಾಗಿರುವುದರಿಂದ ಮೊದಲಿನಂತೆ ಸರಿಯಾಗಿ ಬಸ್ ಗಳು ದೊರೆಯದೇ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಸೌಲಭ್ಯ ದೊರೆಯದೇ ಶಾಲಾ ಮಕ್ಕಳಿಗೆ ತೊಂದರೆಯಾಗಿದ್ದರೆ ಅದು ನಾವು ಶಾಲೆಗಳನ್ನು ಆರಂಭಿಸಿದ್ದರ ಉದ್ದೇಶ ಸಾಕಾರವಾಗುವುದಿಲ್ಲ. ಸಾರಿಗೆ ಸೌಲಭ್ಯ ತೊಂದರೆಯಿಂದ ಮಕ್ಕಳು ಶಾಲೆಗಳಿಗೆ ಹಾಜರಾಗದೇ ಇರುವುದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶೈಕ್ಷಣಿಕ ಹಿನ್ನೆಡೆಗೆ ಕಾರಣವಾಗಬಾರದು ಎಂದೂ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಇತ್ತೀಚಿಗೆ ಕೊರೋನಾ ಹಿನ್ನೆಲೆಯಲ್ಲಿ ಎಲ್ಲ ಕಡೆಗಳಲ್ಲೂ ಇನ್ನೂ ಸಾರಿಗೆ ಬಸ್ ಗಳು ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲವೆಂಬುದು ಎಲ್ಲೆಡೆಯ ವಿದ್ಯಾರ್ಥಿಗಳ ಸಾಮಾನ್ಯ ಮಾತಾಗಿದೆ. ಅದಕ್ಕೂ ಮೊದಲು ಅಂದರೆ ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಸಾರಿಗೆ ಇಲಾಖೆ ನೀಡಿದ ಸಹಕಾರ ಇಡೀ ರಾಜ್ಯದ ಪೋಷಕರ ಮತ್ತು ಮಕ್ಕಳ ಗಮನ ಸೆಳೆದು ಪರೀಕ್ಷೆಗಳು ಯಶಸ್ವಿಯಾದವು. ಈ ಪರೀಕ್ಷೆಯ ಯಶಸ್ಸಿನಲ್ಲಿ ಸಾರಿಗೆ ಮತ್ತು ಆರೋಗ್ಯ ಇಲಾಖೆಗಳದ್ದು ಸಿಂಹಪಾಲು ಎಂದರೆ ಅತಿಶಯೋಕ್ತಿಯೇನೂ ಅಲ್ಲ. ನಾಡಿನ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳ ಸಮಯದ ಬಸ್ ಗಳು ಸಮರ್ಪಕವಾಗಿ ಕಾರ್ಯಾಚರಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿ ಬಸ್ ಗಳನ್ನೇ ಅವಲಂಬಿಸಿರುವ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here