ಬೆಂಗಳೂರು:
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಅಸ್ಪತ್ರೆಗೆ 5 ಟನ್ ನಷ್ಟು ಆಕ್ಸಿಜನ್ ಪೂರೈಕೆಗೆ ಸಂಸದ ತೇಜಸ್ವೀ ಸೂರ್ಯ ವ್ಯವಸ್ಥೆ ಕಲ್ಪಿಸಿದ್ದು, ಕೋವಿಡ್ ರೋಗಿಗಳಿಗೆ ವಿಶೇಷ ನಿಗಾ ಘಟಕದ ವಿಸ್ತರಣೆಗೆ ಕ್ರಮ ಕೈಗೊಂಡಿದ್ದಾರೆ.
ಶುಕ್ರವಾರದಂದು ಸೇಂಟ್ ಜಾನ್ಸ್ ಮೆಡಿಕಲ್ ಆಸ್ಪತ್ರೆಗೆ ಭೇಟಿ ನೀಡಿ , ಸರ್ಕಾರದಿಂದ ಸೂಚಿಸಲ್ಪಡುವ ಕೋವಿಡ್ ರೋಗಿಗಳಿಗೆ ಹಂಚಿಕೆ ಮಾಡಲಾಗಿರುವ ಬೆಡ್ ಗಳ ಸಂಖ್ಯೆಯನ್ನು ಪರಿಶೀಲನೆ ನಡೆಸಿದ ಸಂಸದರು,462 ವಾರ್ಡ ಗಳ ಪೈಕಿ 342 ವಾರ್ಡ್ ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿರಿಸಿದ್ದನ್ನು ಖಚಿತಪಡಿಸಿಕೊಂಡರು. ಹೆಚ್ಚುವರಿಯಾಗಿ 72 ವಾರ್ಡ್ ಗಳಲ್ಲಿ ಕೋವಿಡ್ ಸೇವೆಗೆ ಮೀಸಲಿರಿಸಿದ್ದನ್ನು ಆಸ್ಪತ್ರೆ ಆಡಳಿತ ಮಂಡಳಿ ಈ ಸಂದರ್ಭದಲ್ಲಿ ಖಚಿತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿನ ಆಕ್ಸಿಜನ್ ಸಿಲಿಂಡರ್ ಗಳ ಅಗತ್ಯತೆ ಕುರಿತು ಅರಿವಿಗೆ ಬಂದ ನಂತರ, ತಕ್ಷಣವೇ ಯುನಿವರ್ಸಲ್ ಏರ್ ಪ್ರಾಡಕ್ಟ್ಸ್ ಸಂಸ್ಥೆಗೆ ಕರೆ ಮಾಡಿ, ಪ್ರತೀ 2 ದಿನಗಳಿಗೆ ಒಮ್ಮೆ 10 ಟನ್ ಮೆಡಿಕಲ್ ಆಕ್ಸಿಜನ್ ಪೂರೈಕೆಗೊಳಿಸುವಂತೆ ಸೂಚಿಸಿದ್ದಾರೆ.
ನಂತರ ಮಾತನಾಡಿದ ಸಂಸದ ಶ್ರೀ ತೇಜಸ್ವೀ ಸೂರ್ಯ ರವರು, ” ಸೇಂಟ್ ಜಾನ್ಸ್ ಮೆಡಿಕಲ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವ ಕುರಿತು ಹಲವು ದೂರುಗಳು ಬಂದಿದ್ದು, ರೋಗಿಗಳನ್ನು ನೋಂದಣಿಗೊಳಿಸಲು ಘಂಟೆಗಟ್ಟಲೆ ಕಾಯುವ ಪರಿಸ್ಥಿತಿಯನ್ನು ಶೀಘ್ರವೇ ತಗ್ಗಿಸಲು ಸೂಚನೆ ನೀಡಿದ್ದೇನೆ. ಬಿಬಿಎಂಪಿ/ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್/ ಸರ್ಕಾರದಿಂದ ಸೂಚಿಸಲ್ಪಡುವ ಯಾವುದೇ ರೋಗಿಗೆ ಪ್ರವೇಶ ನಿರಾಕರಿಸದಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ” ಎಂದು ತಿಳಿಸಿದರು.
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತ ಮಂಡಳಿಯು ನಿಯಮಿತ ನೀರು ಪೂರೈಕೆಯಲ್ಲಿನ ವ್ಯತ್ಯಯದ ಕುರಿತು ಸಂಸದರ ಗಮನ ಸೆಳೆದಾಗ,ತಕ್ಷಣವೇ ಬೆಂಗಳೂರು ನೀರು ಸರಬರಾಜು ಮಂಡಳಿಗೆ ಕರೆ ಮಾಡಿ, ಆಸ್ಪತ್ರೆಯ ನೀರು ಪೂರೈಕೆ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.
Tejasvi Surya's Live Address on COVID-19 https://t.co/TAHxWfXbg2
— Tejasvi Surya (@Tejasvi_Surya) April 23, 2021
“ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲಿ ಸರ್ಕಾರವು ಎಲ್ಲ ವೈದ್ಯಕೀಯ ಸಿಬ್ಬಂದಿ/ ಆಸ್ಪತ್ರೆಗಳೊಂದಿಗೆ ಸಹಕಾರ ಬಯಸುತ್ತಿದ್ದು, ಎಲ್ಲರೂ ಸೇರಿ ಈ ಮಹಾಮಾರಿಯನ್ನು ಎದುರಿಸಿ ವಿಜಯಿಯಾಗೋಣ, ಮತ್ತೊಮ್ಮೆ ಎಲ್ಲ ಆಸ್ಪತ್ರೆಗಳಲ್ಲಿ ವಿನಂತಿಸುವುದೇನೆಂದರೆ, ಖಾಸಗೀ ಆಸ್ಪತ್ರೆಯಲ್ಲಿ ಶೇ.50 ಬೆಡ್ ಹಂಚಿಕೆಯನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಬೇಕು” ಎಂದು ಸಂಸದ ಶ್ರೀ ತೇಜಸ್ವೀ ಸೂರ್ಯ ವಿವರಿಸಿದರು.
ಇಲ್ಲಿಯವರೆಗೆ ಬೆಂಗಳೂರು ದಕ್ಷಿಣದ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿರುವ ಸಂಸದ ತೇಜಸ್ವೀ ಸೂರ್ಯ ರವರು, ಶೇ.50 ರಷ್ಟು ಬೆಡ್ ಹಂಚಿಕೆ ನೀತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದ್ದು, ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಲಯದ ವಾರ್ ರೂಮ್ ಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.