ಜೂನ್ 4ರಿಂದ ಕೆಆರ್ ಪುರಂ ಲೌರಿ ಅಂಡರ್ಬ್ರಿಡ್ಜ್ನಲ್ಲಿ ಸಂಚಾರ ನಿರ್ಬಂಧ; ವೈಟ್ಫೀಲ್ಡ್, ಐಟಿಪಿಎಲ್, ರಾಮಮೂರ್ತಿ ನಗರ ಮಾರ್ಗಗಳಿಗೆ ಪರ್ಯಾಯ ವ್ಯವಸ್ಥೆ
ಬೆಂಗಳೂರು, ಮೇ 31: ಕೆಆರ್ ಪುರಂ ಸಮೀಪದ ಲೌರಿ ಅಂಡರ್ಬ್ರಿಡ್ಜ್ನಲ್ಲಿ ರೈಲ್ವೆ ಸೇತುವೆಯ ಸ್ಲ್ಯಾಬ್ ಬದಲಾವಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೂನ್ 4ರಿಂದ ಜೂನ್ 9ರವರೆಗೆ ತಾತ್ಕಾಲಿಕ ಸಂಚಾರ ನಿರ್ಬಂಧ ಹಾಗೂ ಮಾರ್ಗ ಬದಲಾವಣೆ ಜಾರಿಗೊಳಿಸಲಾಗಿದೆ.
ಈ ಅವಧಿಯಲ್ಲಿ ಕೆಆರ್ ಪುರಂ, ರಾಮಮೂರ್ತಿ ನಗರ ಹಾಗೂ ಐಟಿಐ ಕಾಲೋನಿಗೆ ಲೌರಿ ಅಂಡರ್ಬ್ರಿಡ್ಜ್ ಮೂಲಕ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಬಂದ್ ಆಗಿರಲಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಕೆಆರ್ ಪುರಂ ಕೇಬಲ್ ಸ್ಟೇಡ್ ಬ್ರಿಡ್ಜ್ ಮೂಲಕ ಸಂಚರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಅದೇ ರೀತಿ ಲೌರಿ ಅಂಡರ್ಬ್ರಿಡ್ಜ್ ಮೂಲಕ ಐಟಿಪಿಎಲ್ ಹಾಗೂ ವೈಟ್ಫೀಲ್ಡ್ ಕಡೆಗೆ ತೆರಳುವ ರಸ್ತೆ ಕೂಡ ಜೂನ್ 4ರಿಂದ ಜೂನ್ 9ರವರೆಗೆ ಮುಚ್ಚಲ್ಪಡಲಿದೆ. ವೈಟ್ಫೀಲ್ಡ್, ಐಟಿಪಿಎಲ್ ಮತ್ತು ಸುತ್ತಮುತ್ತಲಿನ ಐಟಿ ಕಾರಿಡಾರ್ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರು ಕೆಆರ್ ಪುರಂ ಕೇಬಲ್ ಸ್ಟೇಡ್ ಬ್ರಿಡ್ಜ್ ಬಳಸುವಂತೆ ಮನವಿ ಮಾಡಲಾಗಿದೆ.
ಇದರ ಜೊತೆಗೆ ಕೆಆರ್ ಪುರಂ–ಐಟಿಪಿಎಲ್ ಮುಖ್ಯರಸ್ತೆಯಲ್ಲಿ ವೈಟ್ಫೀಲ್ಡ್ ಕಡೆಗೆ ತೆರಳುವ ಮಾರ್ಗವನ್ನು ಜೂನ್ 7ರ ಸಂಜೆ 6 ಗಂಟೆಯಿಂದ ಜೂನ್ 8ರ ಬೆಳಗ್ಗೆ 6 ಗಂಟೆಯವರೆಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ. ಈ ಅವಧಿಯಲ್ಲಿ ರಸ್ತೆ ಅಡಿಭಾಗದ ಸೇತುವೆ (RUB) ಸಮೀಪ ಕಲ್ಪಿಸಲಾಗಿರುವ ಪರ್ಯಾಯ ಮಾರ್ಗದ ಮೂಲಕ ವಾಹನಗಳನ್ನು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.
ರೈಲ್ವೆ ಸೇತುವೆ ಸ್ಲ್ಯಾಬ್ ಬದಲಾವಣೆ ಕಾಮಗಾರಿಯನ್ನು ಸುರಕ್ಷಿತವಾಗಿ ಕೈಗೊಳ್ಳುವ ಉದ್ದೇಶದಿಂದ ಈ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ವಾಹನ ಸವಾರರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳಬೇಕು ಎಂದು ಸಂಚಾರ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸಂಚಾರ ಮಾರ್ಗ ಬದಲಾವಣೆಯಿಂದ ಉಂಟಾಗುವ ತಾತ್ಕಾಲಿಕ ಅನಾನುಕೂಲತೆಗೆ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.
