ಬೀದರ್ ವಿಶ್ವವಿದ್ಯಾಲಯದ ಪದವೀಧರರಿಗೆ ಥಾವರ್ಚಂದ್ ಗೆಹ್ಲೋಟ್ ಕರೆ: ಜ್ಞಾನ, ಕೌಶಲ್ಯವನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿ
ಬೀದರ್, ಸೆಪ್ಟೆಂಬರ್ 12: ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ನಿರ್ಣಾಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ್ಯ ಮತ್ತು ಪ್ರತಿಭೆಯನ್ನು ಸಮಾಜದ ಹಿತ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಕರೆ ನೀಡಿದರು.
ಬೀದರ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೆಹ್ಲೋಟ್, ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ ಎಂದರು. ಯಶಸ್ಸು ದೊರೆತಾಗ ವಿನಮ್ರರಾಗಿರಬೇಕು, ಕಷ್ಟದ ಸಂದರ್ಭಗಳಲ್ಲಿ ಧೈರ್ಯ ಕಳೆದುಕೊಳ್ಳಬಾರದು ಹಾಗೂ ವೈಫಲ್ಯ ಎದುರಾದಾಗ ಮತ್ತೆ ಎದ್ದು ದೃಢಸಂಕಲ್ಪದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಜೀವನದಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಗೊಂದಲ ಎದುರಾದಾಗ, ತಮ್ಮ ಜ್ಞಾನ ಮತ್ತು ಸಾಮರ್ಥ್ಯದ ಮೂಲಕ ದೇಶ ಹಾಗೂ ಸಮಾಜದ ಒಳಿತಿಗಾಗಿ ಏನು ಮಾಡಬಹುದು ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳು ತಮ್ಮನ್ನು ತಾವೇ ಕೇಳಿಕೊಳ್ಳಬೇಕು ಎಂದು ರಾಜ್ಯಪಾಲರು ಹೇಳಿದರು. ಇಂತಹ ಚಿಂತನೆ ಜೀವನವನ್ನು ಸಾರ್ಥಕಗೊಳಿಸುವುದರ ಜೊತೆಗೆ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಪ್ರೇರೇಪಿಸುತ್ತದೆ ಎಂದರು.
ಕೃತಕ ಬುದ್ಧಿಮತ್ತೆ ಮತ್ತು ಹೊಸ ತಂತ್ರಜ್ಞಾನಗಳಿಂದ ಜಗತ್ತಿನಲ್ಲಿ ವೇಗವಾಗಿ ಬದಲಾವಣೆಗಳು ನಡೆಯುತ್ತಿರುವುದನ್ನು ಉಲ್ಲೇಖಿಸಿದ ಗೆಹ್ಲೋಟ್, ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಸ್ಥಳೀಯ ಸಮಸ್ಯೆಗಳನ್ನು ಹೊಸ ಆಲೋಚನೆಗಳ ಮೂಲಕ ಅವಕಾಶಗಳಾಗಿ ಪರಿವರ್ತಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಕೃಷಿ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಡಿಜಿಟಲ್ ಸೇವೆಗಳು, ಪರಿಸರ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಾವೀನ್ಯತೆ ಮತ್ತು ನವೋದ್ಯಮಗಳಿಗೆ ಸಾಕಷ್ಟು ಅವಕಾಶಗಳಿವೆ. ಉತ್ತಮ ಆಲೋಚನೆ, ಸೂಕ್ತ ಜ್ಞಾನ ಮತ್ತು ದೃಢಸಂಕಲ್ಪವಿದ್ದರೆ ಸಣ್ಣ ಪ್ರಯತ್ನವನ್ನೂ ದೊಡ್ಡ ಬದಲಾವಣೆಯಾಗಿ ಪರಿವರ್ತಿಸಬಹುದು ಎಂದು ಅವರು ಹೇಳಿದರು.
ಭಾರತದ ಸಾವಿರಾರು ವರ್ಷಗಳ ಜ್ಞಾನ ಪರಂಪರೆಯ ಮಹತ್ವವನ್ನೂ ಪ್ರಸ್ತಾಪಿಸಿದ ರಾಜ್ಯಪಾಲರು, ಗಣಿತ, ವೈದ್ಯಕೀಯ, ಖಗೋಳಶಾಸ್ತ್ರ, ತತ್ವಶಾಸ್ತ್ರ, ಭಾಷೆ, ಸಾಹಿತ್ಯ, ಕೃಷಿ ಮತ್ತು ಪರಿಸರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತವು ಜಗತ್ತಿಗೆ ಮಹತ್ವದ ಕೊಡುಗೆ ನೀಡಿದೆ ಎಂದರು.
ಈ ಜ್ಞಾನ ಪರಂಪರೆಯ ಕುರಿತು ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆ ನಡೆಸಿ, ಆಧುನಿಕ ಸಂದರ್ಭದಲ್ಲಿ ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಭಾರತೀಯ ಜ್ಞಾನ ಪರಂಪರೆಯಲ್ಲಿ ಬೇರೂರಿರುವುದರ ಜೊತೆಗೆ ಆಧುನಿಕ ವಿಜ್ಞಾನವನ್ನೂ ಅಳವಡಿಸಿಕೊಂಡ ಭಾರತವನ್ನು ನಿರ್ಮಿಸಬೇಕು ಎಂದು ಹೇಳಿದರು.
ಭಾರತವು ವಿಶ್ವದ ಪ್ರಮುಖ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗುವತ್ತ ವೇಗವಾಗಿ ಮುನ್ನಡೆಯುತ್ತಿದೆ ಎಂದ ಗೆಹ್ಲೋಟ್, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಇಂದು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೇ ನಾಳಿನ ವಿಜ್ಞಾನಿಗಳು, ಶಿಕ್ಷಕರು, ಉದ್ಯಮಿಗಳು, ವೈದ್ಯರು, ಆಡಳಿತಗಾರರು ಮತ್ತು ರಾಷ್ಟ್ರ ನಿರ್ಮಾಪಕರಾಗಲಿದ್ದಾರೆ. ಆದ್ದರಿಂದ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ದೇಶದ ಪ್ರಗತಿಗಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬೀದರ್ನ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪ ಮತ್ತು ವೈವಿಧ್ಯತೆಯನ್ನು ಪ್ರಸ್ತಾಪಿಸಿದ ಗೆಹ್ಲೋಟ್, ಭಾರತದ ಶಕ್ತಿ ಕೇವಲ ಭೌತಿಕ ಸಂಪನ್ಮೂಲಗಳಲ್ಲಿ ಮಾತ್ರವಲ್ಲದೆ ಅದರ ಜ್ಞಾನ ಪರಂಪರೆ ಮತ್ತು ಸಾಂಸ್ಕೃತಿಕ ಪ್ರಜ್ಞೆಯಲ್ಲಿಯೂ ಅಡಗಿದೆ ಎಂಬುದನ್ನು ಈ ಪ್ರದೇಶದ ಪರಂಪರೆ ತೋರಿಸುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಈ ಪ್ರತಿಭೆಯನ್ನು ಗುಣಮಟ್ಟದ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸಂಶೋಧನೆ ಮತ್ತು ಆಧುನಿಕ ಅವಕಾಶಗಳೊಂದಿಗೆ ಸಂಪರ್ಕಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಈ ಪ್ರದೇಶದ ಯುವಜನರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬೀದರ್ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿ, ಜ್ಞಾನಾಧಾರಿತ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿ ಬೆಳೆಯಲಿದೆ ಎಂಬ ವಿಶ್ವಾಸವನ್ನು ರಾಜ್ಯಪಾಲರು ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು, ಉನ್ನತ ಗುರಿಗಳನ್ನು ಹೊಂದಬೇಕು ಮತ್ತು ತಮ್ಮ ಪ್ರಯತ್ನಗಳಲ್ಲಿ ನಿರಂತರತೆ ಕಾಯ್ದುಕೊಳ್ಳಬೇಕು. ತಮ್ಮ ಜ್ಞಾನ ಮತ್ತು ಕೌಶಲ್ಯದ ಮೂಲಕ ಭಾರತವನ್ನು ಸ್ವಾವಲಂಬಿ, ಆರ್ಥಿಕವಾಗಿ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಗೆಹ್ಲೋಟ್ ಹೇಳಿದರು.
ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪಡೆದ ಶಿವಯ್ಯ ಸ್ವಾಮೀಜಿ ಮತ್ತು ಆರ್.ಎಂ. ಜನವಾಡಕರ್ ಅವರನ್ನು ರಾಜ್ಯಪಾಲರು ಅಭಿನಂದಿಸಿದರು. ಪದವಿ ಮತ್ತು ಪದಕ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು, ಶಿಕ್ಷಕರು ಹಾಗೂ ಬೀದರ್ ವಿಶ್ವವಿದ್ಯಾಲಯದ ಸಮುದಾಯಕ್ಕೂ ಅಭಿನಂದನೆ ಸಲ್ಲಿಸಿದರು.
ನಿವೃತ್ತ ನ್ಯಾಯಮೂರ್ತಿ ಡಾ. ಕೃಷ್ಣ ಎಸ್. ಮತ್ತು ಕುಲಪತಿ ಪ್ರೊ. ಬಿ.ಎಸ್. ಬೀರಾದಾರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
