ಬೆಂಗಳೂರು : ಪೋಷಕರ ಗಲಾಟೆ ಬಿಡಿಸಲು ಹೋದ ಮಗ ಕೊಲೆಯಾದ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇಲ್ಲಿನ ಜರಗನಹಳ್ಳಿಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಸಾಫ್ಟ್ ವೇರ್ ಉದ್ಯೋಗಿ ಯಶವಂತ್ (23) ಕೊಲೆಯಾದ ಪುತ್ರ ಎಂದು ಪೊಲೀಸರು ಗುರುತಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಬಸವರಾಜು ಅವರ ತಾಯಿಗೆ ವಯಸ್ಸಾಗಿದ್ದು, ಹಾಸಿಗೆ ಹಿಡಿದಿದ್ದರು. ತಾಯಿಯ ವಿಚಾರ ಸೇರಿದಂತೆ ಕೆಲವು ವಿಚಾರಗಳಿಗಾಗಿ ಪತಿ ಪತ್ನಿಯ ನಡುವೆ ಆಗಾಗ್ಗೆ ಗಲಾಟೆಗಳಾಗುತ್ತಿದ್ದವು ಎನ್ನಲಾಗಿದೆ. ಇಂದು ಬೆಳಗ್ಗೆಯೂ ಸಹ ಗಲಾಟೆಯಾಗುತ್ತಿದ್ದಾಗ ಪತ್ನಿಯ ಮೇಲೆ ಬಸವರಾಜು ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದೆ.
ಆಗ ಮಗ ಯಶವಂತ್ ಮಧ್ಯಪ್ರವೇಶಿಸಿ ತಂದೆಯನ್ನು ತಡೆದಿದ್ದಾನೆ. ಇದರಿಂದ ಕೋಪಗೊಂಡ ತಂದೆ ಹಾಗೂ ಮಗನ ನಡುವೆ ವಾಗ್ವಾದ ನಡೆದಿದೆ. ಬಸವರಾಜು ಅಡುಗೆ ಮನೆಯಲ್ಲಿದ್ದ ಚಾಕು ಹಿಡಿದು ಮಗನನ್ನು ಬೆದರಿಸಲು ಯತ್ನಿಸಿದ್ದಾನೆ. ನಂತರ ಮಗನ ಎದೆಗೆ ಇರಿದಿದ್ದಾನೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಯಶವಂತ್‍ನನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಮಾರ್ಗಮಧ್ಯೆ ಆತ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.
ಈ ಸಂಬಂಧ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.