ಹಾವೇರಿ:
ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ನಾನು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗುತ್ತೇನೆ ಅನ್ನುವುದು ಮಾದ್ಯಮದ ಸೃಷ್ಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಇಂದು ನಡೆದ ಹಾವೇರಿ ಜಿಲ್ಲಾ ಕೋರ್ ಕಮಿಟಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಹಾವೇರಿ ಗದಗ ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಬಗ್ಗೆ ಚರ್ಚೆ ನಡೆಯಿತು ಸಭೆಯಲ್ಲಿ ಕೆಲವು ನಿರ್ಣಯ ಕೈಗೊಂಡಿದ್ದೆವೆ. ಪಕ್ಷದ ಅಧ್ಯಕ್ಷರು ಪದಾದಿಕಾರಿಗಳು ಸೇರಿ ತಂಡ ಮಾಡಿ ಕೋರ್ ಸಮಿತಿ ಮಾಡಬೇಕು ಎಂಬ ನಿರ್ಣಯ ಆಗಿತ್ತು. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳ ಜೊತೆ ಚರ್ಚೆ ಮಾಡಿದ್ದೇನೆ ಎಂದರು.
ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಅಂತ ನಾನು ಎಲ್ಲಾದರೂ ಹೇಳಿದಿನಾ ಎಂದು ಪ್ರಶ್ನಿಸಿದರು.
ಹಾವೇರಿ ಕ್ಷೇತ್ರದ ಈಶ್ವರಪ್ಪ ಪುತ್ರ ಕಾಂತೇಶ್ ಸ್ಪರ್ಧೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರರಕ್ಕೆ ನನ್ನ ಉತ್ತರ ಇಷ್ಟೆ — ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
ಜೆಡಿಎಸ್- ಬಿಜೆಪಿ ಮೈತ್ರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಯಲ್ಲಿ ಏನು ನಡೆದಿದೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ.
ಈ ಅನಿಷ್ಟ ಸರ್ಕಾರದ ವಿರುದ್ಧ ಜಂಟಿ ಹೋರಾಟ ಮಾಡುವ ಭಾವನೆ ಎಲ್ಲರಿಗೂ ಇದೆ. ಅಮಿತ್ ಶಾ- ದೇವೆಗೌಡರ ಭೇಟಿ ಸ್ವಾಗತಾರ್ಹ. ಜೆಡಿಎಸ್ ನವರೂ ಸ್ಪಷ್ಟವಾಗಿ ಏನೂ ಹೇಳುತ್ತಿಲ್ಲ. ಕೆಲವೇ ವಾರಗಳಲ್ಲಿ ಯಾರಿಗೆ ಎಷ್ಟು ಕ್ಷೇತ್ರ ಎನ್ನುವ ಅಂಕಿ ಸಂಖ್ಯೆ ಸ್ಪಷ್ಟ ಆಗಲಿದೆ ಎಂದರು.
ವಿಪಕ್ಷ ನಾಯಕನ ಆಯ್ಕೆ ವಿಳಂಬ ಆಗುತ್ತಿರುವ ಬಗ್ಗೆ ಯಾರಿಗೂ ಗೊತ್ತಿಲ್ಲ. ರಾಜ್ಯಾದ್ಯಕ್ಷ ಹಾಗೂ ವಿಪಕ್ಷ ನಾಯಕ ಎರಡೂ ಒಟ್ಟಿಗೆ ಮಾಡಲು ಸಮಯ ಹಿಡಿದಿರಬಹುದು ಅಂತ ನನ್ನ ವಯಕ್ತಿಕ ಅಭಿಪ್ರಾಯ ಎಂದರು.
ಸಭೆಯಲ್ಲಿ ಕೆಲವು ತೀರ್ಮಾನ ಮಾಡಿದ್ದೇವೆ. ಬೂತ್ ಮಟ್ಟದಿಂದ ಮತ್ತೆ ಸಂಘಟನೆ ಮಾಡುವುದು. ಯುವಕರಿಗೆ, ಮಹಿಳೆಯರಿಗೆ, ಒಬಿಸಿಯವರಿಗೆ ಹೆಚ್ಚಿನ ಪ್ರಧಾನ್ಯತೆ ಕೊಡುವುದು. ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡುವ ಬಗ್ಗೆ ಚರ್ಚೆ ಆಯಿತು ಎಂದರು.
ಅಧಿಕಾರಕ್ಕೆ ಬಂದಾಗಿನಿಂದ ಹಲವು ವಿಚಾರಗಳಲ್ಲಿ ಈ ಸರ್ಕಾರ ವಿಫಲ ಆಗಿದೆ. ಸಂಪೂರ್ಣ ಅಭಿವೃದ್ಧಿ ನಿಂತು ಹೋಗಿದೆ.ಹಿಡಿ ಮಣ್ಣು ಹಾಕುವ ಕಾರ್ಯಕ್ರಮ ಮಾಡಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಹೇಳಿದ್ದಾರೆ, ಅನೇಕರು ಸಿಎಂಗೆ ಪತ್ರ ಬರೆದಿದ್ದಾರೆ. ಆದರೂ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದರು.
ಸಿದ್ದರಾಮಯ್ಯ ಒನ್ ಟು ವ್ಯತ್ಯಾಸ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ವಿಶೇಷ ವ್ಯಾಖ್ಯಾನ ಮಾಡಿದ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಒನ್ ಹಾಗೂ ಸಿದ್ದರಾಮಯ್ಯ ಟೂ ನಡುವೆ ಬಹಳಷ್ಟು ವ್ಯತ್ಯಾಸ ಇದೆ. 2013-18 ವರೆಗಿನ ಸಿದ್ದರಾಮಯ್ಯ ಒನ್ ಮತ್ತು 2023 ರ ಸಿದ್ದರಾಮಯ್ಯ 2 ಗೂ ಬಹಳಷ್ಟು ವ್ಯತ್ಯಾಸ ಇದೆ. ಈಗ ಭ್ರಷ್ಟಾಚಾರ ಅವರ ಮೂಗಿನ ನೇರಕ್ಕೆ ನಡೆದರೂ ಏನು ಮಾಡದ ಸ್ಥಿತಿಯಲ್ಲಿದ್ದಾರೆ. ಅದಕ್ಕಾಗಿ ಬರಗಾಲ ಘೋಷಣೆ ಆಗಿಲ್ಲ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ಗೆ ಕೇಂದ್ರ ಹಣ ಬಿಡುಗಡೆ ಮಾಡಿದರೂ ಬಳಸಿಲ್ಲ. ಇವರಿಗೆ ರೈತ ವಿರೋಧಿ ಅನ್ನದೇ ಇನ್ನೇನು ಅನ್ನಲು ಸಾಧ್ಯ. ರೈತರ ಆತ್ಮಹತ್ಯೆಯ ಬಗ್ಗೆ ಗಂಭೀರತೆ ಇಲ್ಲ. ಹಣಕ್ಕಾಗಿ ಆತ್ಮಹತ್ಯೆ ಆಗುತ್ತವೆ ಅಂತ ನೀವು ಹೇಳಿಬಿಡಿ ಇದು ನಿಮ್ಮ ನೀತಿನಾ ಎಂದು ಮುಖ್ಯಮಂತ್ರಿ ಯನ್ನು ಪ್ರಶ್ನಿಸಿದರು.
ಇನ್ನು ಮಹಾದಾಯಿ ವಿಚಾರದಲ್ಲಿ ಕೇಂದ್ರಕ್ಕೆ ಆಸಕ್ತಿ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಟ್ರಿಬುನಲ್ ಮಾಡಿ ಅಂತ ಅಫಿಡವಿಟ್ ಕೊಟ್ಟರು. ಅದರ ಬಗ್ಗೆ ಸಿದ್ದರಾಮಯ್ಯ ಯಾಕೆ ಮಾತನಾಡುವುದಿಲ್ಲ.
ಮಹದಾಯಿ ಯೋಜನೆ ಆಗಬಾರದು ಅಂತ ಗೋವಾದವರು ಗೋಡೆ ಕಟ್ಟಿದರು. ನೀರು ಹೇಗೆ ಬರುತ್ತದೆ. ಆಗ ಸಿದ್ದರಾಮಯ್ಯ ಯಾಕೆ ಮಾತನಾಡಲಿಲ್ಲ? ಪರಿಸರ ಅನುಮತಿ ನೀಡುವ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿ ಇದೆ. ಇವರು ಕ್ಲಿಯರನ್ಸ್ ಪಡೆಯಲಿ ಎಂದು ಹೇಳಿದರು.