ಜಪಾನ್ನಲ್ಲಿ ಮೈಹನ್ ಶಿಂಕು ಕೊಗ್ಯೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್.
ಬೆಂಗಳೂರು: ಜಪಾನ್ನಲ್ಲಿ ನಡೆಸಿದ ಮಾತುಕತೆಯ ನಂತರ ತ್ಸುಜಿಕಾವಾ, ಟಿಎಚ್ಎಸ್ ಸ್ಪ್ರಿಂಗ್ಸ್ ಮತ್ತು ಮೈಹನ್ ಶಿಂಕು ಕೊಗ್ಯೊ ಎಂಬ ಜಪಾನ್ನ ಮೂರು ಕಂಪನಿಗಳ ಕರ್ನಾಟಕದ ಹೂಡಿಕೆ ಯೋಜನೆ ಮತ್ತು ಆಸಕ್ತಿಯನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಂಚಿಕೊಂಡಿದ್ದಾರೆ.
ನಿಖರ ಉಪಕರಣಗಳು, ಎನ್ಗ್ರೇವಿಂಗ್ ಡೈಸ್ ಮತ್ತು ಕೈಗಾರಿಕಾ ಯಂತ್ರೋಪಕರಣ ತಯಾರಿಸುವ ತ್ಸುಜಿಕಾವಾ, ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಉತ್ಪಾದನಾ ಘಟಕ ಹೊಂದಿದ್ದು, ಕರ್ನಾಟಕದಲ್ಲಿ 10 ವರ್ಷ ಪೂರೈಸಿದೆ. ಮುಂದಿನ ಹಂತವಾಗಿ ಆಟೋಮೋಟಿವ್ ಸ್ಟಾಂಪಿಂಗ್ ಉತ್ಪಾದನೆಗೆ ಅಲ್ಲಿ ಹೊಸ ಉತ್ಪಾದನಾ ಮಾರ್ಗ ಸ್ಥಾಪಿಸಲು ಹೂಡಿಕೆ ಮಾಡಲು ಯೋಜಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಪಾನ್ನ ಹೊಸೋಡಾ ಗ್ರೂಪ್ನ ಭಾಗವಾಗಿರುವ ಆಟೋ ಬಿಡಿಭಾಗಗಳ ಸಂಸ್ಥೆ ಟಿಎಚ್ಎಸ್ ಸ್ಪ್ರಿಂಗ್ಸ್, ಮೊದಲ ಹಂತದಲ್ಲಿ ತುಮಕೂರಿನಲ್ಲಿ 3 ಎಕರೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ₹50 ಕೋಟಿಗೂ ಅಧಿಕ ಹೂಡಿಕೆ ಮಾಡಲಿದೆ ಎಂದು ಅವರು ಹೇಳಿದ್ದಾರೆ. ಇದು ಜಪಾನ್ನ ಉತ್ಪಾದನಾ ಹೂಡಿಕೆಗಳ ನೆಚ್ಚಿನ ತಾಣವಾಗಿ ತುಮಕೂರಿನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.
ಸುಧಾರಿತ ಕೋಟಿಂಗ್ ಮತ್ತು ಫಂಕ್ಷನಲ್ ಫಿಲ್ಮ್ ತಯಾರಿಸುವ ಮೈಹನ್ ಶಿಂಕು ಕೊಗ್ಯೊ, ಭಾರತ ಪ್ರವೇಶ ಮತ್ತು ಕರ್ನಾಟಕದಲ್ಲಿ ಹೂಡಿಕೆ ಕುರಿತು ಚರ್ಚಿಸಿದೆ. ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಮತ್ತಿತರ ಎಲೆಕ್ಟ್ರಾನಿಕ್ ಸಾಧನಗಳ ಡಿಸ್ಪ್ಲೇಗೆ ಗೀರು ನಿರೋಧಕ ಮತ್ತು ಮಂಜು ನಿರೋಧಕ ಪರಿಹಾರ ಒದಗಿಸುವ ಸಂಸ್ಥೆ, ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೋಟಿವ್ ವಲಯದ ಅವಕಾಶಗಳಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಕಾರ್ಯಾಚರಣೆ ವಿಸ್ತರಿಸುವಲ್ಲಿ ಆಸಕ್ತಿ ತೋರಿದೆ.
ಎಲೆಕ್ಟ್ರಾನಿಕ್ಸ್, ವಿದ್ಯುತ್ ವಾಹನ ಮತ್ತು ಸುಧಾರಿತ ಉತ್ಪಾದನೆಯಲ್ಲಿ ಬೆಂಗಳೂರಿನ ಸಾಮರ್ಥ್ಯವನ್ನು ಮೈಹನ್ಗೆ ಪರಿಚಯಿಸಿ, ಪ್ರಮುಖ ಉದ್ಯಮಗಳೊಂದಿಗೆ ಸಂಪರ್ಕ ಸೇರಿ ಎಲ್ಲ ನೆರವಿನ ಭರವಸೆ ನೀಡಲಾಗಿದೆ. ತ್ಸುಜಿಕಾವಾ ವಿಸ್ತರಣೆಗೆ ಸಹಕಾರ ಮತ್ತು ಟಿಎಚ್ಎಸ್ ಸ್ಪ್ರಿಂಗ್ಸ್ಗೆ ಭೂಮಿ, ಮೂಲಸೌಕರ್ಯ, ಅನುಮೋದನೆ ಮತ್ತು ಸಮನ್ವಯದ ನೆರವಿನ ಭರವಸೆ ನೀಡಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
ಕಂಪನಿಗಳ ನಾಯಕತ್ವವನ್ನು ಜಾಗತಿಕ ಹೂಡಿಕೆದಾರರ ಸಮಾವೇಶ ‘ಜಿಐಎಂ 2027’ಕ್ಕೂ ಆಹ್ವಾನಿಸಲಾಗಿದೆ.
