Home ಕೊಪ್ಪಳ ತುಂಗಭದ್ರಾ ಅಣೆಕಟ್ಟು ಕ್ರಸ್ಟ್ಗೇಟ್ ವಿಚಾರ; ಪ್ರತಿಪಕ್ಷದವರ ಟೀಕೆಗಳು ಸತ್ತು ಹೋದವು, ಕೆಲಸ ಉಳಿದುಕೊಂಡಿತು: ಡಿಸಿಎಂ ಡಿ.ಕೆ.ಶಿವಕುಮಾರ್

ತುಂಗಭದ್ರಾ ಅಣೆಕಟ್ಟು ಕ್ರಸ್ಟ್ಗೇಟ್ ವಿಚಾರ; ಪ್ರತಿಪಕ್ಷದವರ ಟೀಕೆಗಳು ಸತ್ತು ಹೋದವು, ಕೆಲಸ ಉಳಿದುಕೊಂಡಿತು: ಡಿಸಿಎಂ ಡಿ.ಕೆ.ಶಿವಕುಮಾರ್

16
0
Tungabhadra Dam Crustgate Issue; Opposition's criticism dies down, work survives: DCM DK Shivakumar

ಬೆಂಗಳೂರು/ಕೊಪ್ಪಳ, ಆ. 21: “ತುಂಗಭದ್ರಾ ಅಣೆಕಟ್ಟು ಕ್ರಸ್ಟ್ ಗೇಟ್ ಅವಘಡ ವಿಚಾರವಾಗಿ ವಿರೊಧ ಪಕ್ಷಗಳು ಕೇವಲ ಟೀಕೆ ಮತ್ತು ರಾಜಕೀಯ ಮಾಡುತ್ತಿದ್ದವು. ಆದರೆ ನಮ್ಮ ಕೆಲಸಗಳು ಉಳಿದುಕೊಂಡಿತು, ಅವರ ಟೀಕೆಗಳು ಸತ್ತು ಹೋದವು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ಸದಾಶಿವ ನಗರದ ನಿವಾಸ ಹಾಗೂ ತದ ನಂತರ ಕೊಪ್ಪಳದ ಗಿಣಿಗೇರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು “ನಮ್ಮ ತಂತ್ರಜ್ಞರು, ಅಧಿಕಾರಿಗಳು, ಇಂಜಿನಿಯರ್ ಗಳು, ಕಾರ್ಮಿಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಈ ಭಾಗದ ಶಾಸಕರು ಅವಘಡ ನಡೆದ ದಿನದಿಂದ ಒಂದು ರಾತ್ರಿಯೂ ನಿದ್ದೆ ಮಾಡದೆ ಕೆಲಸ ಮಾಡಿದ್ದಾರೆ. ದೇವರ, ಜನರ ಆಶೀರ್ವಾದದಿಂದ ಈ ಕೆಲಸ ನಡೆದಿದೆ. ನಮ್ಮ ರೈತರನ್ನು ನಾವು ಬದುಕಿಸಿದ್ದೇವೆ” ಎಂದರು.

ನವಲಿ ಅಣೆಕಟ್ಟಿನ ಬಗ್ಗೆ ಸರ್ಕಾರದ ಆಲೋಚನೆ: ತುಂಗಭದ್ರಾ ಅಣೆಕಟ್ಟಿನ ಆಯಸ್ಸು ಕಡಿಮೆಯಿದೆ ಎನ್ನುವ ಬಗ್ಗೆ ಕೇಳಿದಾಗ “ಯಾವ ಆಯಸ್ಸು ಕಡಿಮೆಯಿಲ್ಲ. ತುಂಗಭದ್ರಾ ಅಣೆಕಟ್ಟು ಕಟ್ಟುವಾಗಲೇ ಪ್ರತಿವರ್ಷ ಅರ್ಧ ಟಿಎಂಸಿಯಷ್ಟು ಹೂಳು ತುಂಬಿಕೊಳ್ಳುತ್ತದೆ ಎನ್ನುವ ವರದಿಯಿತ್ತು ಎಂದು ಎಂ.ಬಿ.ಪಾಟೀಲರು ಮೊದಲೇ ಹೇಳಿದ್ದರು. ಮುಂದಿನ ದಿನಗಳಲ್ಲಿ ಪ್ರವಾಸ ನಡೆಸಿ ನವಲಿ ಸಮತೋಲಿತ ಅಣೆಕಟ್ಟಿನ ವಿಚಾರವಾಗಿ ಕೆಲಸ ಮಾಡಲಾಗುವುದು. ಇದರ ಪ್ರಸ್ತಾಪವನ್ನು ಈಗಾಗಲೇ ಬಜೆಟ್ ಅಲ್ಲಿ ಸೇರಿಸಲಾಗಿದೆ” ಎಂದು ತಿಳಿಸಿದರು.

ಕ್ರಸ್ಟ್ ಗೇಟ್ ಗಳನ್ನು 45 ವರ್ಷಗಳಿಗೊಮ್ಮೆ ಬದಲಾಯಿಸಬೇಕು ಎನ್ನುವ ವರದಿಯಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದಾಗ “ನಾನು ತಂತ್ರಜ್ಞನಲ್ಲ. ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗೆ ಎಂದು ತಾಂತ್ರಿಕ ಸಮಿತಿ ರಚನೆ ಮಾಡಿದ್ದೇವೆ. ಈ ತಂಡ ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದೆ. ಅವರು ಎಲ್ಲಾ ಅಣೆಕಟ್ಟುಗಳ ಸುರಕ್ಷಾತ ವರದಿಯನ್ನು ನೀಡಲಿದ್ದಾರೆ. ಅವರ ವರದಿಯ ಮೇಲೆ ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಆ ಕೆಲಸಗಳನ್ನು ಸರ್ಕಾರ ಮಾಡಲಿದೆ”ಎಂದು ತಿಳಿಸಿದರು.

ತುಂಗಭದ್ರಾ ತುಂಬಿದ ತಕ್ಷಣ ಬಾಗಿನ ಅರ್ಪಣೆ: “ತುಂಗಭದ್ರಾ ಅಣೆಕಟ್ಟಿನ ಗೇಟ್ ಅನ್ನು ಕಾರ್ಮಿಕರ, ಇಂಜಿನಿಯರ್ ಗಳ, ಅಧಿಕಾರಿಗಳ ಶ್ರಮದಿಂದ ದುರಸ್ತಿ ಮಾಡಲಾಗಿದೆ. ಅಣೆಕಟ್ಟು ತುಂಬಿದ ತಕ್ಷಣ ನಾನು ಮತ್ತು ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತೇವೆ. ಕೊಪ್ಪಳಕ್ಕೆ ವಿಮಾನ ಮಾರ್ಗದಲ್ಲಿ ಬರುವಾಗ ವೀಕ್ಷಣೆ ಮಾಡಿದೆವು. ಅಣೆಕಟ್ಟು ಶೀಘ್ರ ತುಂಬಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ನಾರಾಯಣ ಎಂಜಿನಿಯರಿಂಗ್, ಜಿಂದಾಲ್ ಮತ್ತು ಹಿಂದೂಸ್ಥಾನ್ ಇಂಜಿನಿಯರಿಂಗ್ ಈ ಮೂರು ಕಂಪೆನಿಗಳು ಮಾಡಿದ ಸಹಾಯದಿಂದ ಕೇವಲ ನಾಲ್ಕು ದಿನಗಳಲ್ಲಿ ಗೇಟ್ ದುರಸ್ತಿ ಮಾಡಲಾಯಿತು. ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡ ಪ್ರತಿಯೊಬ್ಬ ಕಾರ್ಮಿಕರನ್ನು ಗೌರವಿಸುವ ಕೆಲಸ ಸರ್ಕಾರ ಮಾಡಲಿದೆ. ಇಡೀ ದೇಶವೇ ಏನಾಗಬಹುದು ಎಂದು ಈ ಕೆಲಸವನ್ನು ಕಾತರದಿಂದ ನೋಡುತ್ತಿತ್ತು. ನಾವು ಇದರಲ್ಲಿ ಯಶಸ್ಸು ಕಂಡಿದ್ದೇವೆ” ಎಂದು ಹೇಳಿದರು.

LEAVE A REPLY

Please enter your comment!
Please enter your name here