ಬೆಂಗಳೂರು: ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಸಮೀಪ ಬೃಹತ್ ಮರವೊಂದು ಧರೆಗೆ ಉರುಳಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
ಘಟನೆ ನಡೆದ ವೇಳೆ ಮಳೆ ಅಥವಾ ಬಲವಾದ ಗಾಳಿ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ನಗರದ ಹಳೆಯ ಮತ್ತು ಅಪಾಯಕಾರಿಯಾಗಿರುವ ಮರಗಳ ಸ್ಥಿತಿಯ ಬಗ್ಗೆ ಆತಂಕಕ್ಕೆ ಕಾರಣವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿರುವ ಮರಗಳು ಹಾಗೂ ಒಣಗಿದ ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸುವಂತೆ ಸ್ಥಳೀಯರು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಗೆ ಒತ್ತಾಯಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಮರಗಳು ಹಾಗೂ ಮರದ ಕೊಂಬೆಗಳು ಉರುಳಿ ಗಾಯಗಳು ಮತ್ತು ಕೆಲ ಸಂದರ್ಭಗಳಲ್ಲಿ ಜೀವಹಾನಿಯೂ ಸಂಭವಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಪರಿಶೀಲನೆ ಮತ್ತು ಸಕಾಲದಲ್ಲಿ ನಿರ್ವಹಣೆ ಕೈಗೊಳ್ಳುವ ಅಗತ್ಯವಿದೆ ಎಂದು ಸ್ಥಳೀಯರು ಹೇಳಿದ್ದಾರೆ.
