UGCET 2026: ಚಾಯ್ಸ್ ದಾಖಲಿಸಲು, ಸೀಟು ರದ್ದತಿಗೆ ಆಗಸ್ಟ್ 29ರವರೆಗೆ ಅವಧಿ ವಿಸ್ತರಿಸಿದ ಕೆಇಎ
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ಗಳ ಪ್ರವೇಶಕ್ಕಾಗಿ ಯುಜಿಸಿಇಟಿ 2026ರ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳನ್ನು ರದ್ದುಪಡಿಸಲು ಹಾಗೂ ಪ್ರವೇಶದ ಚಾಯ್ಸ್ ದಾಖಲಿಸಲು ಇದ್ದ ಗಡುವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಗಸ್ಟ್ 29ರವರೆಗೆ ವಿಸ್ತರಿಸಿದೆ.
ಅಭ್ಯರ್ಥಿಗಳು ನಿಗದಿತ ಶುಲ್ಕ ಪಾವತಿಸಿ, ಹಂಚಿಕೆಯಾದ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ಆಗಸ್ಟ್ 31ರವರೆಗೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಚಾಯ್ಸ್ 1ರಡಿ ಈಗಿರುವ ಸೀಟನ್ನು ಸ್ವೀಕರಿಸಲು ಇಚ್ಛಿಸದೆ, ಮೂರನೇ ಸುತ್ತಿನಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ₹5,000 ದಂಡ ಪಾವತಿಸಿ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಬಹುದು ಎಂದು ಪ್ರಾಧಿಕಾರ ತಿಳಿಸಿದೆ.
ಈ ಅವಧಿ ವಿಸ್ತರಣೆಯಿಂದ ಅಭ್ಯರ್ಥಿಗಳಿಗೆ ಚಾಯ್ಸ್ ದಾಖಲಿಸುವುದು, ಶುಲ್ಕ ಪಾವತಿ, ಕಾಲೇಜಿಗೆ ವರದಿ ಮಾಡಿಕೊಳ್ಳುವುದು ಅಥವಾ ಸೀಟು ರದ್ದತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಸಮಯ ಲಭ್ಯವಾಗಲಿದೆ.
