ಕೋವಿಡ್ ಲಸಿಕೆ ಎರಡನೇ ಡೋಸ್ ಪಡೆದ ಕೇಂದ್ರ ಸಚಿವರು
ಬೆಂಗಳೂರು:
ಕೋವಿಡ್ ಲಸಿಕೆ ನೀಡಿಕೆಯನ್ನು 45 ವರ್ಷದ ಒಳಗಿನವರಿಗೂ ಆರಂಭಿಸುವ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಸುಳಿವು ನೀಡಿದ್ದಾರೆ.
ಕೇಂದ್ರ ಸರ್ಕಾರವು ಸದ್ಯ 45 ವರ್ಷ ಮೇಲ್ಪಟ್ಟವರಿಗಷ್ಟೇ ಉಚಿತ ಲಸಿಕೆ ಒದಗಿಸುತ್ತದೆ. ನಗರದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಇಂದು ಕೋವಿಡ್19 ಲಸಿಕೆಯ 2ನೇ ‘ಡೋಸ್’ ತೆಗೆದುಕೊಂಡ ಸಚಿವರು ಮಾಧ್ಯಮದೊಂದಿಗೆ ಮಾತನಾಡಿ 45 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿ – ಕೇಂದ್ರ ಸರ್ಕಾರವು 45 ವರ್ಷದೊಳಗಿನವರಿಗೂ ಲಸಿಕೆ ನೀಡುವ ಬಗ್ಗೆ ತಯಾರಿ ಮಾಡಿಕೊಳ್ಳುತ್ತಿದೆ ಎಂದರು.
ದೇಶದಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ. ಇದುವರೆಗೆ ಸುಮಾರು 22 ಕೋಟಿ ಡೋಸ್ ಉತ್ಪಾದನೆ ಮಾಡಲಾಗಿದೆ. ಈಗಾಗಲೇ 11ರಿಂದ 12 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಕೊರೊನಾ ನಿಯಂತ್ರಿಸಲು ಭಾರತದ ನೆರವು ಕೇಳಿದ 90 ದೇಶಗಳಿಗೆ 6 ಕೋಟಿ ಡೋಸ್ ಒದಗಿಸಲಾಗಿದೆ. ಈಗ ರಷ್ಯಾದಿಂದ ಸ್ಪುಟ್ನಿಕ್-V ಲಸಿಕೆ ಆಮದುಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಲಸಿಕಾ ಅಭಿಯಾನವನ್ನು ಇನ್ನೂ ವೇಗವಾಗಿ ಮತ್ತು ವಿಸ್ತ್ರತವಾಗಿ ಕೈಗೊಳ್ಳಲು ನೆರವಾಗಲಿದೆ ಎಂದರು.
ಕೊರೊನಾ ಚಿಕಿತ್ಸೆಯಲ್ಲಿ ಬಳಸುವ ರೆಮ್ಡೆಸಿವಿರ್ ಚುಚ್ಚುಮದ್ದಿನ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಅದರ ರಫ್ತು ನಿಷೇಧಿಸಲಾಗಿದೆ. ದೇಶದ ಏಳು ಫಾರ್ಮಾ ಕಂಪನಿಗಳು ಇದರ ಉತ್ಪಾದನೆಯ ಲೈಸನ್ಸ್ ಹೊಂದಿವೆ. ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹೆಚ್ಚು ದಿನ ಸಂಗ್ರಹಿಸಡಲು ಆಗುವುದಿಲ್ಲ. ಮೂರು ತಿಂಗಳೊಳಗೇ ಅದರ ಬಳಕೆಯಾಗಬೇಕು.
ದೇಶೀಯವಾಗಿ ಬೇಡಿಕೆ ಕಡಿಮೆಯಾಗಿದ್ದರಿಂದ ತಮ್ಮಲ್ಲಿರುವ ದಾಸ್ತಾನನ್ನು ಈ ಕಂಪನಿಗಳು ರಫ್ತು ಮಾಡುತ್ತಿದ್ದವು. ಉತ್ಪಾದನೆಯನ್ನೂ ಕಡಿತಗೊಳಿಸಿದ್ದವು. ಆದರೆ ಈಗ ಸೋಂಕು ಹೆಚ್ಚಾಗುತ್ತಿರುವುದರಿಂದ ಉತ್ಪಾದನೆಯನ್ನು ಹೆಚ್ಚಿಸುವಂತೆ ಈ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಫಾರ್ಮಾಸ್ಯುಟಿಕಲ್ ಇಲಾಖೆಯನ್ನೂ ನಿರ್ವಹಿಸುವ ಸದಾನಂದ ಗೌಡ ಹೇಳಿದರು.
ಲಸಿಕಾ ಅಭಿಯಾನ ಅತ್ಯಂತ ಚೆನ್ನಾಗಿಯೇ ನಡೆದಿದೆ. ಹೆಚ್ಚೆಚ್ಚು ಜನರಿಗೆ ಲಸಿಕೆ ನೀಡುವುದಷ್ಟೇ ಇದರ ಉದ್ದೇಶ ಅಲ್ಲ. ಇದರ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸುವಂತಹ ಕೆಲಸಗಳು ಆಗಬಾರದು. ಮೊದಲ ಡೋಸ್ ತೆಗೆದುಕೊಂಡ ಸುಮಾರು 40 ದಿನಗಳ ನಂತರ ನಾನು ಈಗ ಎರಡನೇ ಡೋಸ್ ತೆಗೆದುಕೊಂಡಿದ್ದೇನೆ. ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂದ ಸಚಿವರು ಸುಮಾರು 11 ಸಾವಿರ ಜನರಿಗೆ ಯಶಸ್ವಿಯಾಗಿ ಲಸಿಕೆ ಹಾಕಿದ ಕೆ ಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯನ್ನು ಅಭಿನಂದಿಸಿದರು.