ಶಿಫಾ ಆಸ್ಪತ್ರೆ, ಹೆಚ್.ಬಿ.ಎಸ್ ಆಸ್ಪತ್ರೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಭೇಟಿ ನೀಡಿ ಪರಿಶೀಲನೆ; 24 ಗಂಟೆಯೊಳಗಾಗಿ ಶೇ.50 ರಷ್ಟು ಹಾಸಿಗೆ ನೀಡಲು ಸೂಚನೆ
ಬೆಂಗಳೂರು:
ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತೆ ವಿಕ್ರಮ್ ಆಸ್ಪತ್ರೆಗೆ ಭೇಟಿ ನೀಡಿ ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ.
ಕಳೆದ ವಾರ ಏಪ್ರಿಲ್ 18ರಂದು ಗೌರವ್ ಗುಪ್ತಾ ವಿಕ್ರಮ್ ಆಸ್ಪತ್ರೆಗೆ ಭೇಟಿನೀಡಿ 50% ಹಾಸ್ಗೆ ನೀಡದಿದ್ದ ಕಾರಣಕ್ಕೆ ನೋಟಿಸ್ ಜಾರಿ ಮಾಡಿ ಸಮಜಾಯಿಷಿ ಉತ್ತರ ಕೊಡುವ ಅವಕಾಶ ನೀಡಿದ್ರು ಆದರೆ ವಿಕ್ರಮ್ ಆಸ್ಪತ್ರೆ ಬಿಬಿಎಂಪಿ ಆದೇಶದ ಪಾಲನೆ ಮಾಡುವಲ್ಲಿ ವೈಫಲ್ಯವಾಗಿದೆ.
ಇಂದು ಪುನಹ ವಿಕ್ರಮ್ ಆಸ್ಪತ್ರೆಗೆ ಭೇಟಿ ನೀಡಿ ಗೌರವ್ ಗುಪ್ತ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದ್ದಾರೆ.

ಇದಲ್ಲದೇ ಗುಪ್ತಾ ಅವರು ಶಿಫಾ ಆಸ್ಪತ್ರೆ, ಹೆಚ್.ಬಿ.ಎಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂರು ಆಸ್ಪತ್ರೆಗಳಲ್ಲಿ ಸರ್ಕಾರದ ಆದೇಶದಂತೆ ಹಾಸಿಗೆಗಳನ್ನು ಮೀಸಲಿಟ್ಟಿಲ್ಲ ಹಾಗೂ ಹೆಚ್ಚಿನ ಐಸಿಯು ಹಾಸಿಗೆಗಳನ್ನು ಮೀಸಲಿಟ್ಟಿಲ್ಲ — ಈ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ನೋಟೀಸ್ ನೀಡಿ 24 ಗಂಟೆಯೊಳಗಾಗಿ ಶೇ.50 ರಷ್ಟು ಹಾಸಿಗೆ ನೀಡಲು ಸೂಚನೆ ನೀಡಿದರು.
ಇದಲ್ಲದೆ ಆಸ್ಪತ್ರೆಗಳಿಗೆ ಜಲಮಂಡಳಿ ಹಾಗೂ ಬೆಸ್ಕಾಂನಿಂದ ಆಸ್ಪತ್ರೆಗಳ ಮೇಲೆ ನಿಗಾವಹಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, ಹಾಸಿಗೆಗಳನ್ನು ನೀಡದ ಆಸ್ಪತ್ರೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ರವರು ಎಚ್ಚರಿಕೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗುಪ್ತಾ ಅವರು ಮುಂದಿನ ದಿನಗಳಲ್ಲಿ 11,000 ಹಾಸಿಗೆಗಳನ್ನು ಪಡೆಯಲಾಗುವುದು. ಅದಲ್ಲದೆ ಅವಶ್ಯಕತೆಗನುಗುಣವಾಗಿ ಹಾಸಿಗೆ ಸಾಮರ್ಥ್ಯವನ್ನು ಇನ್ನೂ ಹೆಚ್ಚಳ ಮಾಡಲಾಗುವುದು. ಹಾಸಿಗೆ ಸಮಸ್ಯೆ ಎಲ್ಲೂ ಆಗದಂತೆ ಕ್ರಮವಹಿಸಲಾಗುತ್ತಿದೆ ಎಂದರು.
ಪರಿಶೀಲನೆ ವೇಳೆ ವಲಯ ಆಯುಕ್ತರು ಮನೋಜ್ ಜೈನ್, ವಲಯ ಜಂಟಿ ಆಯುಕ್ತರು ಪಲ್ಲವಿ, ಡಿಸಿಪಿ ಶರಣಪ್ಪ, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಆರೋಗ್ಯಾಧಿಕಾರಿ ಸಿದ್ದಪ್ಪಾಜಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.