
We presented comprehensive budget; people suffered from central government's price hike for eight years: Chief Minister Siddaramaiah
ಅಕ್ಕಿ ಕೊಡ್ತೀವಿ ಅಂದಾಗ ಬೇಡ ಹಣ ಕೊಡಿ ಅಂದ್ರು-ಈಗ ಹಣ ಕೊಡ್ತಿದ್ದೀವಿ, ಬೇಡ ಅಕ್ಕಿ ಕೊಡಿ ಅಂತಾರೆ: ಬಿಜೆಪಿಯವರ ಡಬ್ಬಲ್ ಟಂಗ್
ನಮ್ಮ ಗ್ಯಾರಂಟಿಗಳಿಗೆ ನಾಡಿನ ಶೇ90 ರಷ್ಟು ಮಂದಿ ಫಲಾನುಭವಿಗಳು
ಈಗಾಗಲೇ ಕೋಟಿ ಮಂದಿ ನೋಂದಣಿ ಮಾಡಿಸಿದ್ದಾರೆ. ಪ್ರತೀ ದಿನ 49 ಲಕ್ಷ ಮಹಿಳೆಯರು ಉಚಿತ ಪ್ರಯಾಣಿಸುತ್ತಿದ್ದಾರೆ
ಬೆಂಗಳೂರು:
ದುರ್ಬಲ ವರ್ಗದ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪೂರ್ಣ ಪ್ರಮಾಣದ ಬಜೆಟ್ ನ್ನು ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ತಮ್ಮ 14 ನೇ ಆಯವ್ಯಯ ಮಂಡಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ಸರ್ಕಾರ ನೀಡಿದ ಭರವಸೆಗಳು , ಜನರ ಹೊಸ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. 2023-24 ರ ಬಜೆಟ್ ಗಾತ್ರ 3,27,747 ಕೋಟಿ ರೂ.ಗಳಾಗಿದೆ. 2022-23 ರಲ್ಲಿ ಬಜೆಟ್ 265720 ಕೋಟಿ ರೂ. ಗಳ ಚುನಾವಣಾ ಪೂರ್ವ ಬಜೆಟ್ ನ್ನು ಹಿಂದಿನ ಸರ್ಕಾರ ಮಂಡಿಸಿತ್ತು.
ಈ ಬಜೆಟ್ ನಾವು ಜನತೆಗೆ ನೀಡಿದ್ದ 5 ಗ್ಯಾರಂಟಿಗಳು, ಆಶ್ವಾಸನೆಗಳು ಮತ್ತು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದ ಕೆಲವು ಭರವಸೆಗಳನ್ನು ಒಳಗೊಂಡಿರುವ ಹಾಗೂ ಜಾರಿಮಾಡುತ್ತಿರುವ ಗ್ಯಾರಂಟಿ ಬಜೆಟ್ ಆಗಿದೆ ಎಂದರು.
ನಮ್ಮ 5 ಗ್ಯಾರೆಂಟಿಗಳಿಗೆ ಈ ವರ್ಷದ ಉಳಿದ ಅವಧಿಗೆ ಒಟ್ಟು 35410 ರೂ. ಕೋಟಿ ಅಗತ್ಯವಿದೆ. ಐದು ಗ್ಯಾರೆಂಟಿಗಳಿಗೆ ವರ್ಷಕ್ಕೆ ಒಟ್ಟು 52000 ಕೋಟಿ ರೂ. ಗಳಿಗೂ ಹೆಚ್ಚು ಅನುದಾನ ಅಗತ್ಯವಿದೆ. ವಿರೋಧ ಪಕ್ಷದವರು , ಇವುಗಳಿಗೆ ದುಡ್ಡು ಹೇಗೆ ಸರಿದೂಗಿಸುತ್ತಾರೆ. ಗ್ಯಾರೆಂಟಿ ಜಾರಿ ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯವರು ನಾವು ಘೋಷಣೆ ಮಾಡಿದಾಗ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಲಿದೆ ಎಂದು ಟೀಕಿಸಿದ್ದರು. ನಾವು ಗ್ಯಾರೆಂಟಿಗಳಿಗೆ ಹಣ ಕ್ರೋಢೀಕರಣ ಮಾಡುತ್ತೇವೆ. ಎಲ್ಲ ಗ್ಯಾರೆಂಟಿಗಳನ್ನು ನೂರಕ್ಕೆ ನೂರು ಜಾರಿಗೊಳಿಸುತ್ತೇವೆ. ನಮ್ಮ ಮಾತಿನಂತೆ ನಡೆದುಕೊಂಡಿದ್ದೇವೆ. ರಾಜ್ಯ ದಿವಾಳಿಯಾಗದಂತೆ ನೋಡಿಕೊಳ್ಳಲಾಗಿದೆ. ಪ್ರಣಾಳಿಕೆಯಲ್ಲಿ ಹೇಳಿದ 76 ಕಾರ್ಯಕ್ರಮಗಳನ್ನು ಜಾರಿ ಮಾಡಲು ಘೋಷಣೆ ಮಾಡಲಾಗಿದೆ. ಅವುಗಳಿಗೆ ಅನುದಾನವನ್ನೂ ಮೀಸಲಿರಿಸಲಾಗಿದೆ ಎಂದರು.
ಗೃಹಲಕ್ಷ್ಮಿ :
1 ಕೋಟಿ 30 ಲಕ್ಷ ಫಲಾನುಭವಿಗಳಿಗೆ ಲಾಭವಾಗಲಿದೆ. ಈ ವರ್ಷದ ಉಳಿದ ಅವಧಿಗೆ 17,500 ಕೋಟಿ ರೂ. ಹಾಗೂ ಇಡೀ ವರ್ಷಕ್ಕೆ 26,250 ಕೋಟಿ ರೂ. ಅಗತ್ಯವಿದೆ. ಜುಲೈ 16 ರಿಂದ ನೋಂದಣಿ ಪ್ರಾರಂಭವಾಗಿ, ಆಗಸ್ಟ್ 15 ಅಥವಾ 16 ಕ್ಕೆ ಮೊದಲನೇ ಕಂತು ಬಿಡುಗಡೆಯಾಗಲಿದೆ. ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ಅವರ ಖಾತೆಗೆ ವರ್ಗಾಯಿಸಲಾಗುವುದು ಎಂದರು.
ಗೃಹಜ್ಯೋತಿ :
ಈ ಯೋಜನೆಯಡಿ ರಾಜ್ಯದ ಶೇ.99 ರಷ್ಟು ಕುಟುಂಬಗಳು ಯೋಜನೆಗೆ ವ್ಯಾಪ್ತಿಗೊಳಪಡುತ್ತವೆ. 1 ಕೋಟಿಗೂ ಹೆಚ್ಚು ನೋಂದಣಿಯಾಗಿದ್ದು, ಈ ವರ್ಷದ ಬಾಕಿ ಅವಧಿಗೆ 9000 ಕೋಟಿ ರೂ. ಇಡೀ ವರ್ಷಕ್ಕೆ 13500 ಕೋಟಿ ರೂ. ಅಗತ್ಯವಿದೆ ಎಂದರು.
ಶಕ್ತಿ ಯೋಜನೆ :
ಜೂನ್ 11 ರಿಂದ ಜಾರಿಗೊಳಿಸಲಾಗಿದ್ದು, ಪ್ರತಿದಿನ ಸುಮಾರು 49.6 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 13.56 ಕೋಟಿ ಉಚಿತ ಟ್ರಿಪ್ ಮಾಡಲಾಗಿದೆ. ಜೂನ್ 11 ರಿಂದ ಮಾರ್ಚ್ ಅಂತ್ಯದವರೆಗೆ 2,800 ಕೋಟಿ ರೂ. ಹಾಗೂ ಇಡೀ ವರ್ಷಕ್ಕೆ 4000 ಕೋಟಿ ರೂ. ಅಗತ್ಯವಿದೆ ಎಂದರು.
ಅನ್ನಭಾಗ್ಯ :
ಹಿಂದೆ ನಾನು ಸಿಎಂ ಆಗಿದ್ದಾಗ, ಪ್ರತಿ ಬಿಪಿಎಲ್ ಅವರಿಗೆ 7 ಕೇಜಿ ಅಕ್ಕಿ ನೀಡಲಾಗುತ್ತಿತ್ತು. ಹಸಿವು ಮುಕ್ತ ಕರ್ನಾಟಕ ಮಾಡಬೇಕು. ಯಾರು ಹಸಿದು ಮಲಗಬಾರದು. ಈ ಬಾರಿ 10 ಕೆಜಿ ಆಹಾರ ಧಾನ್ಯ ಕೊಡುತ್ತೇವೆ ಎಂದು ಘೋಷಿಸಿದ್ದೆವು. ಎಲ್ಲಾ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ದಾರರು 4.42 ಕೋಟಿ ಜನರಿಗೆ ಈ ಯೋಜನೆಯ ಲಾಭವಾಗಲಿದೆ. ಈ ವರ್ಷಕ್ಕೆ 10275 ಕೋಟಿ ರೂ. ಬೇಕಾಗುತ್ತದೆ. ಜುಲೈ 1 ರಿಂದ ಅಕ್ಕಿ ನೀಡುವುದಾಗಿ ನೀಡಿರುವ ಮಾತನ್ನು ತಪ್ಪಬಾರದು ಎಂದು ಜುಲೈ 10 ರಿಂದ 5 ಕೆಜಿಗೆ 170 ರೂ.ಗಳನ್ನು ಪ್ರತಿಯೊಬ್ಬ ಫಲಾನುಭವಿಗೆ ನೀಡಲಾಗುವುದು. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಟೆಂಡರ್ ಕರೆಯಲಾಗಿದೆ. ಅಕ್ಕಿ ಸಿಗುವವರೆಗೆ ಫಲಾನುಭವಿಗಳ ಖಾತೆಗೆ 170 ರೂ. ನೀಡಲಾಗುವುದು ಎಂದರು.
ಯುವನಿಧಿ
2022-23 ರಲ್ಲಿ ತೇರ್ಗಡೆಯಾದ ಪದವೀಧರರು, ಡಿಪ್ಲೋಮಾ ಪಡೆದವರು 6 ತಿಂಗಳವರೆಗೆ ಉದ್ಯೋಗ ಸಿಗದಿದ್ದರೆ, ಅಂತಹವರಿಗೆ 24 ತಿಂಗಳವರೆಗೆ ಪದವೀಧರರಿಗೆ ಮಾಹೆಯಾನ 3000 ರೂ. ಹಾಗೂ ಡಿಪ್ಲೋಮಾ ಪಡೆದವರಿಗೆ 1500 ರೂ. ನೀಡಲಾಗುವುದು. ಈ ವರ್ಷಕ್ಕೆ 215 ಕೋಟಿ ರೂ. ಅಗತ್ಯವಿದ್ದು , ಇಡೀ ವರ್ಷಕ್ಕೆ 1000 ಕೋಟಿ ರೂ.ಗಳಾಗುತ್ತದೆ. ಒಟ್ಟು 3ಲಕ್ಷ70 ಸಾವಿರ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ ಎಂದು ತಿಳಿಸಿದರು.
ಎಸ್ ಸಿಎಸ್ ಪಿ/ ಟಿಎಸ್ ಪಿ ಕಾರ್ಯಕ್ರಮಗಳಿಗೆ 34,294 ಕೋಟಿ ರೂ. ನೀಡಿದ್ದೇವೆ , 6,060 ಕೋಟಿ ರೂ.ಗಳಷ್ಟು ಹಂಚಿಕೆಯನ್ನು ಹೆಚ್ಚಿಸುವ ಮೂಲಕ,ಈ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ.
ಮಹಿಳಾ ಉದ್ದೇಶಿತ ಆಯವ್ಯಯ 70,427 ಕೋಟಿ ರೂ.ಗಳಿದ್ದು , ಹಿಂದಿನ ಸಾಲಿಗೆ ಹೋಲಿಸಿದರೆ 27,793 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಇಂದಿರಾ ಕ್ಯಾಂಟೀನ್ ಮರು ಪ್ರಾರಂಭಿಸಲಾಗಿದ್ದು , ಇನ್ನೂ ಹೆಚ್ಚಿನ ಕ್ಯಾಂಟೀನ್ ಗಳನ್ನು ರಾಜ್ಯದ ವಿವಿಧ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.
ಹಿಂದಿನ ಸರ್ಕಾರ ಮೂರ್ಖತನದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಮ್ಮ ಸರ್ಕಾರ ಪ್ರಗತಿದಾಯಕ, ಬಡವರ ಕೈಗೆ ದುಡ್ಡು,ಉದ್ಯೋಗ ನೀಡುವ , ರಾಜ್ಯವನ್ನು ಹಸಿವು ಮುಕ್ತ ಮಾಡುವ ಹಾಗೂ ಬಂಡವಾಳ ಆಕರ್ಷಿಸುವಂತಹ ಬಜೆಟ್ ಮಂಡಿಸಲಾಗಿದೆ ಎಂದರು.