Home ರಾಜಕೀಯ ಮುಖ್ಯಮಂತ್ರಿ ರಾಜೀನಾಮೆ ನೀಡಿ ಎಂದು ಹೇಳುವುದಿಲ್ಲ : ಸಿದ್ದರಾಮಯ್ಯ

ಮುಖ್ಯಮಂತ್ರಿ ರಾಜೀನಾಮೆ ನೀಡಿ ಎಂದು ಹೇಳುವುದಿಲ್ಲ : ಸಿದ್ದರಾಮಯ್ಯ

27
0

ಬೆಂಗಳೂರು:

ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಂಧನ ತಡೆ ಪಡೆದಿರುವ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದು ಎಷ್ಟು ಸರಿ ? ಅವರನ್ನು ರಾಜೀನಾಮೆ ನೀಡಿ ಎಂದು ನಾವು ಕೇಳುವುದಿಲ್ಲ ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ದ ಆರೋಪಗಳಿವೆ.ಈ ಸಂಬಂಧ ಹೈಕೋರ್ಟ್ ನೀಡಿದ ತೀರ್ಪನ್ನು ವಜಾಮಾಡುವಂತೆ ಇಬ್ಬರೂ ಸುಪ್ರೀಂ ಕೋರ್ಟ್ ಗೆ ಹೋದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿದೆ ಎಂದು ಹೇಳುವ ಮೂಲಕ ಅಧಿಕಾರದಲ್ಲಿ ಮುಂದುವರೆಯಲು ಸೂಕ್ತವಲ್ಲವೆಂದು ಪರೋಕ್ಷವಾಗಿ ಕಟುಕಿದರು.

ದಾರಿಯಲ್ಲಿ ನಿಂತ ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ

ರಾಜ್ಯಪಾಲರ ಕೈಯಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ. ಕೆಲವು ಸದಸ್ಯರು ಆ ಸುಳ್ಳುಗಳನ್ನೇ ಬೆಂಬಲಿಸಿ ದೀರ್ಘವಾಗಿ ಭಾಷಣ ಮಾಡಿದ್ದಾರೆ. ಬಜೆಟ್ ನಲ್ಲಿ ಸತ್ಯವೇ ಇಲ್ಲ, ಎಲ್ಲವೂ ಸುಳ್ಳಿನ ಕಂತೆಯಷ್ಟೇ. ಅದು ದಿಕ್ಕು ದೆಸಿ, ಮುಂದಾಲೋಚನೆ, ಮುನ್ನೋಟವೂ ಇಲ್ಲದ ಭಾಷಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ, ಬಜೆಟ್ ನಲ್ಲಿ ಏನೇನೂ ಸತ್ವವೇ ಇಲ್ಲ. ನಮ್ಮ ಸರ್ಕಾರದ ಸಾಧನೆಗಳನ್ನೇ ಯೋಜನೆಗಳನ್ನೇ ನಮ್ಮದೆಂದು ಬಜೆಟ್ ನಲ್ಲಿ ಹೇಳಿಕೊಂಡಿದ್ದಾರೆ. ಯಾವುದೇ ಚುನಾಯಿತ ಸರ್ಕಾರ ಮಾಡುವ ಕೆಲಸವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರಿಗೆ ಒಂದು ಘಟನೆ, ಗೌರವ ಇರುತ್ತದೆ. ಈ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ಅವರ ಬಾಯಿಯ ಮೂಲಕ ಸುಳ್ಳು ಹೇಳಿಸಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು ಮಾಡುವ ಕೆಲಸ ಇದಲ್ಲ. ವಸ್ತುಸ್ಥಿತಿಯನ್ನು, ಮುಂದಿನ ಚಿಂತನೆಗಳನ್ನು ಹೇಳಬೇಕು. ಆದರೆ ಅದನ್ನು ಮಾಡಿಲ್ಲ ಎಂದು ಟೀಕಿಸಿದರು.

assembly


ನೀತಿ ಆಯೋಗದವರು ನಾವೀನ್ಯತಾ ಸೂಚ್ಯಂಕದಲ್ಲಿ ನಮ್ಮ ಸರ್ಕಾರಕ್ಕೆ ಮೊದಲ ಸ್ಥಾನ ನೀಡಿದೆ. ಇದು ನಮ್ಮ ಸರ್ಕಾರಕ್ಕೆ ದೊರಕಬೇಕಾದ ಕ್ರೆಡಿಟ್. ಬಿಜೆಪಿಯವರದ್ದು ಚುನಾಯಿತ ಸರ್ಕಾರವಲ್ಲ, ಜನರಿಂದ ಆರಿಸಿ ಬಂದ ಸರ್ಕಾರವೂ ಅಲ್ಲ, ಪಾಪದ ಹಣ ಖರ್ಚು ಮಾಡಿ ಕಾಂಗ್ರೆಸ್, ಜೆಡಿಎಸ್ ನಿಂದ ಶಾಸಕರನ್ನು ಕರೆಸಿಕೊಂಡು ಸರ್ಕಾರ ರಚಿಸಿದ್ದಾರೆ. ಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ. ಅನೈತಿಕವಾಗಿ ಹುಟ್ಟಿದ ಅಂಗವೈಫಲ್ಯದ ಸರ್ಕಾರವಿದು. ಇಂತಹ ಸರ್ಕಾರದಿಂದ ಯಾನಮ್ಮ ಸರ್ಕಾರವಿದ್ದಾಗ ಟೇಕ್ ಆಫ್ ಆಗಿಲ್ಲ ಎಂದು ಹೇಳುತ್ತಿದ್ದವರು ಈಗ ಇವರ ಸರ್ಕಾರ ಏನಾಗಿದೆ, ಟೇಕಾಫ್ ಅಲ್ಲ ಸರ್ಕಾರ ಆಫ್ ಆಗಿಬಿಟ್ಟಿದೆ, ದಾರಿಯಲ್ಲಿ ನಿಂತ ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ, 18 ತಿಂಗಳಾದರೂ ಯಡಿಯೂರಪ್ಪಗೆ ಸರ್ಕಾರ ಎಂಬ ಬಸ್ ಓಡಿಸಲು ಬರುತ್ತಿಲ್ಲ, ಗೇರ್ ಹಾಕಲು ಕೂಡ ಯಡಿಯೂರಪ್ಪಗೆ ತಿಳಿಯುತ್ತಿಲ್ಲ. ನಾಲ್ಕು ‌ಕಡೆಗಳಿಂದಲೂ ಬಸ್ ಹಿಡಿದು ಎಳೆದಾಡುತ್ತಿದ್ದಾರೆ, ಹೀಗೇ ಎಳೆದರೆ ಗೇರೇ ಕಿತ್ತುಬರಬಹುದು ಎಂದು ವ್ಯಂಗ್ಯವಾಡಿದರು.

ನಮ್ಮ ಸರ್ಕಾರ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಯಡಿಯೂರಪ್ಪ 18 ತಿಂಗಳಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆಗೆ ಬರಲಿ. ನಾವು ಚರ್ಚೆಗೆ ಸಿದ್ಧ, ಯಡಿಯೂರಪ್ಪ ಚರ್ಚೆಗೆ ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದರು.

ಹಾಲು ಉತ್ಪಾದನೆಯಲ್ಲಿ ರಾಜ್ಯ 2ನೇ ಸ್ಥಾನಕ್ಕೆ ಬರಲು ನಮ್ಮ ಸರ್ಕಾರ ಕಾರಣ ಎಂದು ಹೇಳಿದ ಸಿದ್ದರಾಮಯ್ಯ, ದೇಶದಲ್ಲಿ ರೈತರು ಸಂಕಷ್ಟದಲ್ಲಿರುವಾಗ ಕೃಷಿ ಬಿಕ್ಕಟ್ಟಿನ ಬಗ್ಗೆ ಚರ್ಚಿಸಬೇಕಿತ್ತು. ಒಂದೂವರೆ ವರ್ಷವಾದರೂ ಸರ್ಕಾರ ಹಳಿಗೆ ಬಂದಿಲ್ಲ. ಐದು ದಿನದಲ್ಲಿ ನಾಲ್ಕು ಬಾರಿ ಖಾತೆ ಬದಲಾವಣೆ ಮಾಡಲಾಯಿತು. ರಾಜ್ಯದ ಇತಿಹಾಸದಲ್ಲೇ ಈ ರೀತಿ ನಡೆದಿರಲಿಲ್ಲ. ಇದು ಸಮರ್ಥ ಮುಖ್ಯಮಂತ್ರಿ ಮಾಡುವ ಕೆಲಸವೇ ? ಜೆ.ಸಿ. ಮಾಧುಸ್ವಾಮಿಗೆ ಮೂರು ಬಾರಿ ಖಾತೆ ಬದಲಾಯಿಸಿದರು. ಮಾಧುಸ್ವಾಮಿ ಪಾಪ ಮುಂದೆ ಕೂತು ಒಳ್ಳೆಯ ಕೆಲಸ ಮಾಡುತ್ತಿದ್ದವರು, ಅವರನ್ನು ಹಿಂದಕ್ಕೆ ಹಾಕಿಬಿಟ್ಟರು.

ಬೆಂಗಳೂರು ಅಭಿವೃದ್ಧಿ ಯಾರಿಗೂ ಕೊಡಲಿಲ್ಲ ? ಅರವಿಂದ ಲಿಂಬಾವಳಿ ಬೆಂಗಳೂರಲ್ಲವೇ ? ಅವರಿಗೆ ಕೊಡಬಹುದಿತ್ತು, ಅದನ್ನು ಸುರೇಶ್ ಕುಮಾರ್ ಬಹಳ ಹಳಬರು,ಇಲ್ಲೇ ಹುಟ್ಟಿ ಬೆಳೆದವರು, ಅವರಿಗಾದರೂ ಕೊಡಬಹುದಿತ್ತು, ಬೆಂಗಳೂರು ಅಭಿವೃದ್ಧಿಯನ್ನು ಯಡಿಯೂರಪ್ಪ ಅವರೇ ಇಟ್ಟುಕೊಂಡಿದ್ದಾರೆ. ನರಕ ಎಲ್ಲವೂ ಇಲ್ಲೇ ಇದೆ, ಇಲ್ಲೇ ಅನುಭವಿಸಿ ಹೋಗಬೇಕು ಎಂದು ಬಿಜೆಪಿ ನಾಯಕರನ್ನು ಸಿದ್ದರಾಮಯ್ಯ ಕುಟುಕಿದರು.

ಕೊರೊನಾ ಹೆಸರಿನಲ್ಲಿ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಕೊಕ್ಕೆ ಹಾಕಲಾಗಿದೆ. ಎಲ್ಲದಕ್ಕೂ ಕೊರೊನಾ ಕಾರಣ ಮುಂದಿಡುತ್ತಿದ್ದಾರೆ ಎಂದು ಆರೋಪಿಸಿದರು. ಕೊರೊನಾ ಸಂದರ್ಭದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಸುಗ್ರೀವಾಜ್ಞೆ ಹೊರಡಿಸುವ ತುರ್ತು ಏನಿತ್ತು ? ಎಂದು ಪ್ರಶ್ನಿಸಿದರು.

ಈ ಕಾನೂನುಗಳನ್ನು ಜಾರಿಗೆ ತಂದು ರೈತರನ್ನು ಬೀದಿಗೆ ತರಲಾಗಿದೆ. ಪರಿಸ್ಥಿತಿ ಜ್ವಾಲಾ ಮುಖಿಯಂತಾಗಿದೆ. ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಸ್ಫೋಟಗೊಂಡರೆ ಸರ್ಕಾರ ಕೊಚ್ಚಿ ಹೋಗಲಿದೆ. ರೈತರನ್ನು ಎದುರು ಹಾಕಿಕೊಂಡವರು ಯಾರು ಕೂಡ ಉಳಿದಿಲ್ಲ, ಕಠೋರ ಕಾನೂನು ಜಾರಿಗೆ ತಂದು ರೈತರ ಆಕ್ರೋಶಕ್ಕೆ ಸರ್ಕಾರ ತುತ್ತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಹೇಳಿದರೆ ಯಡಿಯೂರಪ್ಪ ಅವರಿಗೆ ಕೋಪ ಬರುತ್ತದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದರು.

ಸದನದಲ್ಲಿ ಅಧಿಕಾರಿಗಳು ಮತ್ತು ಸಚಿವರು ಗೈರಾಗಿರುವುದಕ್ಕೆ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಟೀಕಿಸಿದರು.

LEAVE A REPLY

Please enter your comment!
Please enter your name here