ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ; ಗೌರವ್ ಗುಪ್ತ
ಬೆಂಗಳೂರು:
ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಗರ 1ನೇ ಮುಖ್ಯರಸ್ತೆ ಮತ್ತು 8ನೇ ಮುಖ್ಯ ರಸ್ತೆ 655 ಮಿಟರ್ ಉದ್ದದ ಗ್ರೇಡ್ ಸೆಪರೇಟರ್ ಮೇಲುಸೇತುವೆ ಕಾಮಗಾರಿ ಉದ್ಘಾಟನೆಗೆ ಸಿದ್ದವಾಗಿದ್ದು, ಬಾಕಿಯಿರುವ ಸಣ್ಣ-ಪುಟ್ಟ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಸೂನಚೆ ನೀಡಿದರು.
2016ರಲ್ಲಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮಂಜುನಾಥ ನಗರ ಮೇಲುಸೇತುವೆ, ಶಿವನಗರ ಜಂಕ್ಷನ್ ಬಳಿ ಕೆಳಸೇತುವೆ ಹಾಗೂ ಬಸವೇಶ್ವರ ವೃತ್ತದ ಬಳಿ ಮೇಲುಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಪೈಕಿ ಈಗಾಗಲೇ ಮಂಜುನಾಥ ನಗರದ ಮೇಲುಸೇತುವೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸವಾರರ ಓಡಾಟಕ್ಕೆ ಅನುವುಮಾಡಿಕೊಡಲಾಗಿದೆ. ಶಿವನಗರ ಜಂಕ್ಷನ್ ಬಳಿ ಹಿಂದೆ ಕೆಳಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಇದೀಗ ಕೇಳಸೇತುವೆ ಬದಲಾಗಿ ಮೇಲುಸೇತುವೆ ನಿರ್ಮಾಣ ಮಾಡಲಾಗುತ್ತಿದೆ.
Also Read: Rajajinagar flyover ready, awaits opening by CM
ಅದರಂತೆ, ಶಿವನಗರ 1ನೇ ಮುಖ್ಯರಸ್ತೆ ಮತ್ತು 8ನೇ ಮುಖ್ಯ ರಸ್ತೆ 655 ಮಿಟರ್ ಉದ್ದದ ಮೇಲುಸೇತೆಯನ್ನು 71.98 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಮೇಲುಸೇತುವೆಯಲ್ಲಿ 7.5 ಮೀಟರ್ ಉದ್ದದ ದ್ವಿಮುಖ 4 ಪಥಗಳು ಬರಲಿವೆ. ಮೇಲುಸೇತುವೆ ಭಾಗದಲ್ಲಿ ಡಾಂಬರೀಕರಣ ಅಳವಡಿಸಲಾಗಿದ್ದು, ಮೇಲುಸೇತುವೆಯ ಕೊನೆಯ ಭಾಗದಲ್ಲಿ ರ‍್ಯಾಂಪ್ ಅಳವಡಿಸುತ್ತಿರುವ ಬಳಿ ಮಾತ್ರ ಡಾಂಬರೀಕರಣ ಮಾಡಬೇಕಾಗಿದೆ. ಜೊತೆಗೆ ಬೀದಿ ದೀಪ ಅಳವಡಿಕೆ ಸೇರಿದಂತೆ ಮೇಲುಸೇತುವೆ ಸುಂದರೀಕರಣಕ್ಕಾಗಿ ಮೀಡಿಯನ್ಸ್ ನಲ್ಲಿ ಸಸಿಗಳನ್ನು ನೆಡುವ ಹಾಗೂ ಮೇಲುಸೇತುವೆ ಕೆಳಭಾಗದಲ್ಲಿ ಸಸಿಗಳನ್ನು ನೆಡುವ ಕೆಲಸ ಬಾಕಿಯಿದ್ದು, ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಸವೇಶ್ವರ ನಗರ ಜಂಕ್ಷನ್ ಹಾಗೂ 72ನೇ ಕ್ರಾಸ್ ರಾಜಾಜಿನಗರ ಮೇಲುಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ಕೂಡಾ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜಾಜಿನಗರ ಪೇರೆಂಟ್ಸ್ ಶಾಲೆ ಹತ್ತಿರವಿರುವ ಆಟಡ ಮೈದಾನ ತಪಾಸಣೆ:
ರಾಜಾಜಿನಗರ ಪೇರೆಂಟ್ಸ್ ಶಾಲೆ ಹತ್ತಿರವಿರುವ ಪಾಲಿಕೆಯ ಆಟದ ಮೈದಾನವು 2 ಕೊಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಗ್ಯಾಲರಿ ಹಾಸನಗಳು, ಮೈದಾನದ ಸುತ್ತಲೂ ರೈಟೈನಿಂಗ್ ವಾಲ್ ಸೇರಿದಂತೆ ಇನ್ನಿತರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನಿಡಿದರು. ಈ ವೇಳೆ ಆಟದ ಮೈದಾನದ ಇನ್ನಿತರೆ ಅಭಿವೃದ್ಧಿಗಾಗಿ 2.5 ಕೋಟಿ ರೂ. ಹೆಚ್ಚುವರಿ ಅನುದಾನದ ಅವಶ್ಯಕತೆಯಿದ್ದು, ಅನುದಾನವನ್ನು ನೀಡಲು ಮಾನ್ಯ ಸ್ಥಳೀಯ ಶಾಸಕರು ಆಯುಕ್ತರಿಗೆ ಮನವಿ ಮಾಡಿದರು.
ಹಾವನೂರು ವೃತ್ತದಿಂದ ಶಂಕರಮಠ ವೃತ್ತದವರೆಗಿನ ರಸ್ತೆ ತಪಾಸಣೆ:
ರಾಜಾಜಿನಗರ ಹಾವನೂರು ವೃತ್ತದಿಂದ ಶಂಕರಮಠ ವೃತ್ತದವರೆಗಿನ ರಸ್ತೆ ಹದಗೆಟ್ಟಿದ್ದು, ಕೂಡಲೆ ಡಾಂಬರೀಕರಣ ಮಾಡಲು ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು. ಇನ್ನು ಶಂಕರಮಠ ವೃತ್ತದ ಬಳಿ ಬಸವೇಶ್ವರನಗರ ಕಡೆ ದೊಡ್ಡ ವಾಹನಗಳ ತಿರುವಿಗೆ ಕಷ್ಟವಾಗುತ್ತಿದ್ದು ಅದಕ್ಕೆ ಸೂಕ್ತ ಕ್ರಮ ಕೈಗೊಂಡು ದೊಡ್ಡ ವಾಹನಗಳು ಸುಗಮವಾಗಿ ತಿರುವು ಮಾಡಿಕೊಳ್ಳುವಂತೆ ವ್ಯವಸ್ಥೆ ಮಾಡಲು ಮಾನ್ಯ ಸ್ಥಳೀಯ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜಾಜಿನಗರ 19ನೇ ಮುಖ್ಯ ರಸ್ತೆಯ ವಿವಿಧೋದ್ದೇಶ ಕಟ್ಟಡ ತಪಾಸಣೆ:
ರಾಜಾಜಿನಗರ 19ನೇ ಮುಖ್ಯರಸ್ತೆಯಲ್ಲಿ ವಾರ್ಡ್ ಅನುದಾನದಲ್ಲಿ ವಿವಿದ್ದೋದ್ದೇಶ ಕಟ್ಟಡ ನಿರ್ಮಾಣದ ಹಂತದಲ್ಲಿದ್ದು, ಶೇ.40 ರಷ್ಟು ಕಾಮಗಾರಿ ಪೂರ್ಣಗೊಂಡಿರುತ್ತದೆ. ಅನುದಾನ ಕೊರತೆಯಿಂದಾಗಿ ಕಟ್ಟಡದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಶಾಸಕರ ಅನುದಾನದಿಂದ 3.50 ಕೋಟಿ ರೂ. ನೀಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡದರು.
ದಯಾನಂದನಗರ ವಾರ್ಡ್ ನಲ್ಲಿ ವಿವಿಧೋದ್ದೇಶ ಕಟ್ಟಡ ತಪಾಸಣೆ:
ದಯಾನಂದನಗರ ವಾರ್ಡ್ ನಲ್ಲಿ ನಿರ್ಮಾಣ ಹಂತದಲ್ಲಿರುವ ವಿವಿಧೋದ್ದೇಶ ಕಟ್ಟಡವು ಶೇ. 60 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಅನುದಾನದ ಕೊರೆತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಬಾಕಿಯಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಶಾಸಕರ ಅನುದಾನದಿಂದ 3 ಕೋಟಿ ರೂ. ನೀಡಿದ್ದು, ಟೆಂಡರ್ ಕರೆಯಲಾಗಿರುತ್ತದೆ. ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೆ ಕಾಮಗಾರಿಯ್ನನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡದರು.
ಇದೇ ವೇಳೆ ವಿವಿದೋದ್ದೇಶ ಕಟ್ಟಡ ಪಕ್ಕದಲ್ಲಿಯೇ ಶಿಥಿಲಗೊಂಡಿರುವ ಶಾಲಾ ಕಟ್ಟಡವೊಂದಿದ್ದು, ಆ ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿ ಕೌಶಲ್ಯ ಅಭಿವೃದ್ಧಿಗೆ ಪೂರಕವಾಗಿರುವಂತೆ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ ನವನಗರೋತ್ಥಾನ ಅನುದಾನದಲ್ಲಿ 5 ಕೋಟಿ ರೂ. ಬಿಡುಗಡೆಯಾಗಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು. ಇದರಿಂದ ಸ್ಥಳಿಯ ಕೊಳಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮಾನ್ಯ ಸ್ಥಳೀಯ ಶಾಸಕು ತಿಳಿಸಿದರು. ಈ ವೇಳೆ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಪಾಲಿಕೆಯ ಶಿಥಿಲಗೊಂಡಿರುವ ಕಟ್ಟಡಗಳನ್ನು ಗುರುತಿಸಿ ವರದಿ ನೀಡಲು ಆಯುಕ್ತರು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.
ಈ ವೇಳೆ ಮಾನ್ಯ ಸ್ಥಳೀಯ ಶಾಸಕರಾದ ಸುರೇಶ್ ಕುಮಾರ್, ವಲಯ ಜಂಟಿ ಆಯುಕ್ತರಾದ ಶಿವಸ್ವಾಮಿ, ಮುಖ್ಯ ಅಭಿಯಂತರಾದ(ಯೋಜನೆ) ಲೋಕೇಶ್, ವಲಯ ಮುಖ್ಯ ಅಭಿಯಂತರಾದ ವಿಶ್ವನಾಥ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.