Home High Court/ಹೈಕೋರ್ಟ್ ಕಾನೂನುಬಾಹಿರ ಕಟ್ಟಡ ನೆಲಸಮ ಮಾಡಲು ಬಿಬಿಎಂಪಿ ಹೆದರುತ್ತಿರುವುದೇಕೆ? ಆಯುಕ್ತ ಗುಪ್ತಾಗೆ ಹೈಕೋರ್ಟ್ ತರಾಟೆ

ಕಾನೂನುಬಾಹಿರ ಕಟ್ಟಡ ನೆಲಸಮ ಮಾಡಲು ಬಿಬಿಎಂಪಿ ಹೆದರುತ್ತಿರುವುದೇಕೆ? ಆಯುಕ್ತ ಗುಪ್ತಾಗೆ ಹೈಕೋರ್ಟ್ ತರಾಟೆ

59
0
Karnataka High Court
bengaluru

ಬೆಂಗಳೂರು:

“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮ ಮಾಡಲು ಹೆದರುತ್ತಿರುವುದೇಕೆ? ನಿಮ್ಮನ್ನು ರಕ್ಷಿಸಲು ನಾವಿದ್ದೇವೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಬುಧವಾರ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.

ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಲಾಗಿರುವ ಕಟ್ಟಡಗಳ ನೆಲಸಮಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು “ಬಿಬಿಎಂಪಿ ಏಕೆ ನ್ಯಾಯಾಲಯದ ಆದೇಶಗಳನ್ನು ಪಾಲಿಸುತ್ತಿಲ್ಲ. ಹಲವು ಪ್ರಕರಣಗಳಲ್ಲಿ ಈ ಅಂಶ ಅರಿವಿಗೆ ಬಂದಿದೆ. ಇದುವರೆಗೆ ನಗರದಲ್ಲಿ ಎಷ್ಟು ಕಾನೂನುಬಾಹಿರ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ” ಎಂದು ಖಾರವಾಗಿ ಪ್ರಶ್ನಿಸಿತು.

bengaluru
IAS Gaurav Gupta
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬಿಬಿಎಂಪಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ನಂಜುಂಡ ರೆಡ್ಡಿ ಅವರು “2020ರ ನಂತರ ನಿರ್ಮಾಣವಾದ 5,905 ಕಟ್ಟಡಗಳ ಸರ್ವೆ ನಡೆಸಲಾಗಿದೆ. ಈ ಪೈಕಿ 4,279 ಕಟ್ಟಡಗಳನ್ನು ನಕ್ಷೆ ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ. ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಿರುವವರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಕಾನೂನುಬಾಹಿರವಾಗಿ ನಿರ್ಮಿಸಲಾಗಿರುವ 2,591 ಕಟ್ಟಡಗಳ ಸರ್ವೆ ಬಾಕಿ ಇದೆ. ಬಿಬಿಎಂಪಿಯಿಂದ ನಕ್ಷೆ ಪಡೆಯದೇ ನಿರ್ಮಾಣ ಮಾಡಲಾಗಿರುವ ಕಟ್ಟಡಗಳ ಸರ್ವೆ ಆರಂಭವಾಗಿಲ್ಲ. ಈ ಮಧ್ಯೆ, ಅಕ್ರಮ-ಸಕ್ರಮ ಕಾಯಿದೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದೆ” ಎಂದರು.

ಇದಕ್ಕೆ ಪೀಠವು “ನಕ್ಷೆ ಪಡೆಯದೇ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಿರುವವರ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ. ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮ ಮಾಡಲು ಹೆದರುತ್ತಿರುವುದೇಕೆ? 2019ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ದಾಖಲಾದರೂ ಇದುವರೆಗೆ ಕ್ರಮಕೈಗೊಂಡಿಲ್ಲ. ಬಿಬಿಎಂಪಿ ಅಫಿಡವಿಟ್ ತೃಪ್ತಿದಾಯಕವಾಗಿಲ್ಲ” ಎಂದಿತು.

ಮುಂದುವರಿದು, “ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾಗಿರುವ ಕಾನೂನುಬಾಹಿರ ಕಟ್ಟಡಗಳನ್ನು ತೆರವುಗೊಳಿಸಿ, ಚಿತ್ರ ಸಹಿತ ವರದಿ ಸಲ್ಲಿಸಬೇಕು. ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ, ಡಿಸೆಂಬರ್ 9ರೊಳಗೆ ವಿವರವಾದ ವರದಿಯನ್ನು ಸಲ್ಲಿಸಬೇಕು” ಎಂದು ನ್ಯಾಯಾಲಯವು ಬಿಬಿಎಂಪಿಗೆ ತಾಕೀತು ಮಾಡಿದೆ.

ಇದಕ್ಕೂ ಮುನ್ನ, ಅಕ್ಟೋಬರ್ 4ರಂದು ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇರುವುದರಿಂದ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಆಯುಕ್ತ ಗೌರವ್ ಗುಪ್ತಾ ಅವರು ಖುದ್ದು ಪೀಠದ ಮುಂದೆ ಹಾಜರಗಬೇಕು ಎಂದು ಆದೇಶಿಸಿತ್ತು. ಇದರ ಅನ್ವಯ ವಿಡಿಯೊ ಕಾನ್ಫರೆನ್ಸ್ನಲ್ಲಿ ಇಂದು ಗೌರವ್ ಗುಪ್ತಾ ಹಾಜರಾಗಿದ್ದರು. ಇದರಿಂದ ಅಸಮಾಧಾನಗೊಂಡ ನ್ಯಾಯಾಲಯವು ಖುದ್ದು ಹಾಜರಾತಿಗೆ ಸೂಚಿಸಿದ್ದರೂ ಹೇಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದೀರಿ? ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿ, ಪ್ರಕರಣವನ್ನು ಮುಂದೂಡಿತ್ತು. ಈ ಮಧ್ಯೆ, ಬಿಬಿಎಂಪಿ ಪರ ವಕೀಲರು ತಾನೇ ವಿಡಿಯೋ ಕಾನ್ಫರೆನ್ಸ್ನಲ್ಲಿ ಹಾಜರಾಗುತ್ತಿರುವುದರಿಂದ ಆಯುಕ್ತರು ಅಲ್ಲಿಯ ಬದಲು ವಿಡಿಯೊ ಕಾನ್ಫರೆನ್ಸ್ನಲ್ಲಿಯೇ ಭಾಗಿಯಾಗುವಂತೆ ಸಲಹೆ ನೀಡಿದ್ದಾಗಿ ಪೀಠಕ್ಕೆ ವಿವರಿಸಿದರು. ಇದರಿಂದ ನ್ಯಾಯಾಲಯ ಸಂತುಷ್ಟವಾಗಲಿಲ್ಲ.

bengaluru

LEAVE A REPLY

Please enter your comment!
Please enter your name here