Home ಬೆಂಗಳೂರು ನಗರ ಮಹಿಳೆಯರ ಉಳಿತಾಯ ಸಂಸ್ಕೃತಿ ಬ್ಯಾಂಕ್ ಗಳಿಗಿಂತ ಹೆಚ್ಚು ಸಧೃಢ: ಬಸವರಾಜ ಬೊಮ್ಮಾಯಿ

ಮಹಿಳೆಯರ ಉಳಿತಾಯ ಸಂಸ್ಕೃತಿ ಬ್ಯಾಂಕ್ ಗಳಿಗಿಂತ ಹೆಚ್ಚು ಸಧೃಢ: ಬಸವರಾಜ ಬೊಮ್ಮಾಯಿ

40
0
Women's Savings Culture is Better Than Banks Basavaraj Bommai

ಬೆಂಗಳೂರು:

ಖರ್ಚು ಕೇಂದ್ರಿತವಾದ ಮುಂದುವರಿದ ದೇಶಗಳ ಬ್ಯಾಂಕುಗಳಿಗೆ ಹೋಲಿಸಿದರೆ ನಮ್ಮ ಉಳಿತಾಯ ಸಂಸ್ಕೃತಿಯನ್ನು ಪೋಷಿಸುವ ಅಡುಗೆಮನೆಯಲ್ಲಿರುವ ಸಾಸಿವೆ ಜೀರಿಗೆ ಡಬ್ಬಿಗಳೇ ಹೆಚ್ಚು ಸಧೃಢವಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಮಕ್ಕಳ ದಿನಾಚರಣೆ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತ ದೇಶದಲ್ಲಿ ಉಳಿತಾಯ ಸಂಸ್ಕೃತಿ ಆರಂಭವಾಗುವುದು ಅಡುಗೆ ಮನೆಯಲ್ಲಿ. ಮಹಿಳೆಯರು ಚಿಲ್ಲರೆ ಹಣವನ್ನು ಸಾಸಿವೆ ಜೀರಿಗೆ ಡಬ್ಬಿಯಲ್ಲಿ ಇಡುವ ಸಂಸ್ಕೃತಿಯನ್ನು ಅನುಸರಿಸಿದವರು. ಈ ಸಂಸ್ಕೃತಿ ದೊಡ್ಡ ದೊಡ್ಡ ಬ್ಯಾಂಕುಗಳಿಗಿಂತ ಸದೃಢ ಎಂಬುದು ನನ್ನ ಭಾವನೆ ಎಂದು ಮುಖ್ಯಮಂತ್ರಿ ಹೇಳಿದರು.

ಆರ್ಥಿಕತೆಯ ಕ್ರಾಂತಿಗೆ ಮಹಿಳೆಯರು ಮುನ್ನುಡಿ ಬರೆಯುವಂತಾಗಲಿ: ರಾಜ್ಯದಲ್ಲಿ ಆರ್ಥಿಕತೆಯ ಕ್ರಾಂತಿಗೆ ಮಹಿಳೆಯರು ಮುನ್ನುಡಿ ಬರೆಯಬೇಕು. ಗುಡಿಕೈಗಾರಿಕೆಯಿಂದ ಸ್ಟಾರ್ಟ್‍ಅಪ್‍ವರೆಗೂ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗುವುದು ಎಂದರು.

ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗೆ 43,118 ಕೋಟಿ ರೂ.ಗಳು: ಸರ್ಕಾರದ ವಿವಿಧ ಇಲಾಖೆಗಳ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗೆ 43,118 ಕೋಟಿ ರೂ.ಗಳು ಮೀಸಲಿಡಲಾಗಿದೆ. ಸ್ವ- ಸಹಾಯ ಸಂಘಗಳಿಗೆ ಆರ್ಥಿಕ ಸ್ವಾತಂತ್ರ್ಯ ಗಳಿಸಲು ಹಾಗೂ ಉದ್ಯಶೀಲತೆಯ ವೃದ್ಧಿಗಾಗಿ ತಲಾ 1.5 ಲಕ್ಷ ರೂ.ಗಳ ನೆರವನ್ನು ಒದಗಿಸಲಾಗುವುದು. ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ 500 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಸಹಯೋಗದೊಂದಿಗೆ ಏಕಗವಾಕ್ಷಿ ಸಾಲ ಸೌಲಭ್ಯವನ್ನು ಒದಗಿಸಲಾಗುವುದು. ಸ್ವಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳಿಗೆ ಬ್ರಾಂಡಿಂಗ್, ಮೌಲ್ಯವರ್ಧನೆ ವ್ಯವಸ್ಥೆ ಒದಗಿಸಿ, ಬೃಹತ್ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಲಾಗುತ್ತಿದೆ. ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ರಾಜ್ಯ ಸರ್ಕಾರ ಹಾಗೂ ಅಮೆಜಾನ್ ಸಂಸ್ಥೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು.

ಪೌಷ್ಟಿಕತೆಗೆ ಮಹತ್ವ : ಸದೃಢ ಸಮಾಜದ ನಿರ್ಮಾಣಕ್ಕಾಗಿ ತಾಯಿ ಮಕ್ಕಳ ಉತ್ತಮ ಆರೋಗ್ಯ ಬಹಳ ಮುಖ್ಯ. ಸರಾಸರಿ ಪೌಷ್ಟಿಕತೆಯ ಮಟ್ಟದಿಂದ ಕಡಿಮೆ ಇರುವ 110 ತಾಲ್ಲೂಕುಗಳಲ್ಲಿ ವಿಶೇಷ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಪೌಷ್ಟಿಕತೆಗೆ ಹೆಚ್ಚು ಮಹತ್ವ ನೀಡಲಾಗಿದೆ. ಆರ್ಥಿಕ ಚಟುವಟಿಕೆಯ ಕ್ರಾಂತಿ ಮಹಿಳೆಯರಿಂದ ಸಾಧ್ಯವಾಗಲಿದೆ ಎಂದರು.

ಮಹಿಳೆ ಶಕ್ತಿಯ ಪ್ರತೀಕ : ಭಾರತೀಯ ಸಂಸ್ಕøತಿಯಲ್ಲಿ ತಾಯಿಗೆ ವಿಶೇಷವಾದ ಸ್ಥಾನಮಾನವಿದೆ. ನಮ್ಮ ಪಾಲಿಗೆ ತಾಯಿ ದೇವರಿಗಿಂತ ಮಿಗಿಲು. ಮಹಿಳೆ ಶಕ್ತಿಯ ಪ್ರತೀಕ. ತಾಯಿಯಿಂದಲೇ ಮಹಿಳೆ, ಮಹಿಳೆಯಿಂದಲೇ ಜಗತ್ತು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾದಾಗ ಮಾತ್ರ ದೇಶ ಪ್ರಗತಿಯಾಗುತ್ತದೆ. ಭಾರತ ದೇಶ ಉಳಿತಾಯಮುಖಿಯಾದ ಆರ್ಥಿಕತೆ ಹೊಂದಿದೆ. ಖರ್ಚುಗಳನ್ನು ಕಡಿಮೆ ಮಾಡಿ ಆಪತ್ಕಾಲಕ್ಕೆ ಹಣವನ್ನು ಉಳಿತಾಯ ಮಾಡುವ ಸಂಸ್ಕøತಿ ಮಹಿಳೆಯರಲ್ಲಿದೆ. ಮಹಿಳೆಯರು ಕಠಿಣ ಪರಿಶ್ರಮಿಗಳು. ಮಹಿಳೆಯರ ಪ್ರಾಮಾಣಿಕತೆ, ಉಳಿತಾಯದ ಚಿಂತನೆ ಹಾಗೂ ಕಠಿಣ ಪರಿಶ್ರಮಗಳ ಗುಣಗಳನ್ನು ಅಳವಡಿಸಿಕೊಂಡು ಮಹಿಳಾ ಆರ್ಥಿಕತೆಯನ್ನು ಈ ಬಾರಿಯ ಆಯವ್ಯಯದಲ್ಲಿ ಸರ್ಕಾರ ರೂಪಿಸಿದೆ. ಆರ್ಥಿಕತೆಯ ಯಶಸ್ಸು ದುಡಿಮೆಯಲ್ಲಿ ಅಡಗಿದೆ. ಈಗಿನ ಕಾಲಮಾನದಲ್ಲಿ ದುಡಿಮೆಯೇ ದೊಡ್ಡಪ್ಪ ಆಗಿದೆ. ಸೂಕ್ತ ಪ್ರೋತ್ಸಾಹ ಮತ್ತು ಅವಕಾಶಗಳನ್ನು ನೀಡುವ ಮೂಲಕ ಮಹಿಳೆಯರು ವಿಶೇಷವಾಗಿ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತದೆ ಎಂದರು.

ಬದಲಾವಣೆ ತರಲು ಬದ್ಧ: “ರಾಜ್ಯದಲ್ಲಿ ದೊಡ್ಡ ಬದಲಾವಣೆ ತರಬೇಕಿದೆ. ಈ ನಿಟ್ಟನಲ್ಲಿ ನನ್ನ ಬದ್ಧತೆ ಗಟ್ಟಿಯಾಗಿದೆ. ಸಮಸ್ತ ಕನ್ನಡ ತಾಯಂದಿರ ಸಂರಕ್ಷಣೆಗೆ ಕಂಕಣಬದ್ಧನಾಗಿದ್ದು, ಪ್ರೀತಿ, ವಿಶ್ವಾಸ, ವಾತ್ಸಲ್ಯದಿಂದ ನೋಡಿಕೊಳ್ಳುತ್ತೇನೆ.” ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. “ ಅಂತ:ಕರಣ ಬಹಳ ಮುಖ್ಯ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಜಗತ್ತಿನಲ್ಲಿ ಆಗಿವೆ. ಅಂತ:ಕರಣ ಇರುವ ಸಂಬಂಧ, ಸಂಸ್ಕøತಿ ಇರುವ ಸಮಾಜ ನಿರ್ಮಾಣವಾಗಲು ಮಹಿಳೆಯರು ಎದ್ದು ನಿಲ್ಲಬೇಕು. ಅಂಗನವಾಡಿಗಳಲ್ಲಿ ಕೆಲಸ ಮಾಡುವ ಅಂಗನವಾಡಿ ಸಹೋದರಿಯರು, ಆಶಾ ಕಾರ್ಯಕರ್ತೆಯರು, ಅಡುಗೆ ಮಾಡುವವರು, ಪೌರಕಾರ್ಮಿಕರು, ಮಹಿಳೆಯರು. ಇವರ ಶ್ರೇಯೋಭಿವೃದ್ಧಿಗೆ ಆಯವ್ಯಯದಲ್ಲಿ ಮಾಸಾಶನವನ್ನು ಹೆಚ್ಚು ಮಾಡಲಾಗಿದೆ. ಅವರ ಸೇವೆ ಅಮೋಘವಾಗಿರುವಂಥದ್ದು. ಅಂಗನವಾಡಿ ಕಾರ್ಯಕರ್ತೆಯರು ನಮ್ಮ ಮಕ್ಕಳೆಂದು ಭಾವಿಸಿ ಕೆಲಸ ಮಾಡುತ್ತಾರೆ. ಅದು ಅಂತ:ಕರಣ. ಬರುವ ದಿನಗಳಲ್ಲಿ ಇವರಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇವೆ. ರಾಜ್ಯವನ್ನು ಮನ್ನಡೆಸುವ ಸಂಕಲ್ಪವನ್ನು ತಾಯಂದಿರು ಮಾಡಬೇಕು. ನಿಮ್ಮ ಜೊತೆ ಸರ್ಕಾರ ಇದೆ” ಎಂದರು.

LEAVE A REPLY

Please enter your comment!
Please enter your name here