ಹತ್ಯೆಯಾದ ಜೈನ ಮುನಿ ಪ್ರಮುಖ ಆರೋಪಿ ನಾರಾಯಣ ಬಸಪ್ಪ ಮಾಳಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದರು ಎಂದು ಪೊಲೀಸರು ಬೇಳಿದ್ದಾರೆ. ಬೆಂಗಳೂರು: ಹತ್ಯೆಯಾದ ಜೈನ ಮುನಿ ಪ್ರಮುಖ ಆರೋಪಿ ನಾರಾಯಣ ಬಸಪ್ಪ ಮಾಳಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದರು ಎಂದು ಪೊಲೀಸರು ಬೇಳಿದ್ದಾರೆ.
ಹತ್ಯೆ ಬಳಿಕ ಆರೋಪಿಗಳು ಜೈನ ಮುನಿಗಳಿಗೆ ಸೇರಿದ ಡೈರಿಯನ್ನು ಸುಟ್ಟಿ ಹಾಕಿದ್ದರು. ನಿನ್ನೆಯಷ್ಟೇ ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದ ಪೊಲೀಸ್ ತಂಡ ಡೈರಿ ಸುಟ್ಟ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು, ಪರಿಶೀಲನೆ ನಡೆಸಿತು.
ಈ ವೇಳೆ ಸುಟ್ಟು ಹೋಗಿ ಉಳಿದಿದ್ದ ಡೈರಿಯ ಉಳಿದ ಭಾಗ, ಎರಡು ಮೊಬೈಲ್ ಫೋನ್ ಗಳು ಹಾಗೂ ಆರೋಪಿಗಳ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದರು.
ಕೆಲ ವರ್ಷಗ ಹಿಂದೆ ಆಶ್ರಮ ನಿರ್ಮಾಣಕ್ಕೆ ಆರೋಪಿಗಳು ಮರಳು ಪೂರೈಸಿದ್ದರು. ನಂತರ ಜೈನಮುನಿಗಳಿಗೆ ಹತ್ತಿರವಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಮುನಿಗಳೊಂದಿಗೆ ಹತ್ತಿರವಾದ ಆರೋಪಿ ನಾರಾಯಣ್ ಕೆಲವೇ ತಿಂಗಳುಗಳಲ್ಲಿ ಎರಡು ಟಿಪ್ಪರ್ ಲಾರಿಗಳನ್ನು ಖರೀದಿ ಮಾಡಿ, ಮರಳು ಪೂರೈಕೆ ಮಾಡಲು ಆರಂಭಿಸಿದ್ದ. ಎರಡನೇ ಆರೋಪಿ ಹಸನ್ಸಾಬ್ ಮಕ್ಬುಲ್ ದಲಾಯತ್ (33) ನಾರಾಯಣ್ ಲಾರಿಗಳಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಸಾಲ ಪಡೆದ ಬಳಿಕ ಆರೋಪಿಗಳನ್ನು ಹಣವನ್ನು ಹಿಂತಿರುಗಿಸಿರಲಿಲ್ಲ. ಹೀಗಾಗಿ ಮುನಿಗಳು ಹಣ ಹಿಂತಿರುಗಿಸುವಂತೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಮುನಿಗಳನ್ನೇ ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಇದರಂತೆ ವಿದ್ಯುತ್ ಶಾಕ್ ನೀಡಿ ಮುನಿಗಳನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ. ಆ ಪ್ರಯತ್ನ ವಿಫಲವಾದಾಗ, ಟವರ್ ನಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಬಳಿಕ ಸಾಲದ ಕುರಿತ ಸಾಕ್ಷ್ಯಗಳನ್ನು ನಾಶ ಮಾಡಲು ಡೈರಿ, ರಕ್ತಸಿಕ್ತ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ. ನಂತರ ಮೃತದೇಹವನ್ನು ಗೋಣಿ ಚೀಲಕ್ಕೆ ಹಾಕಿ ಕಟಕಭಾವಿಯ ಹೊಲಕ್ಕೆ ಕೊಂಡೊಯ್ದು ಬೋರ್‌ವೆಲ್‌ಗೆ ಎಸೆಯಲು ಮುಂದಾಗಿದ್ದಾನೆ. ಇಡೀ ದೇಹ ಎಸೆಯಲು ಸಾಧ್ಯವಾಗದಿದ್ದಾಗ ದೇಹವನ್ನು ತುಂಡುಗಳನ್ನಾಗಿ ಕತ್ತರಿಸಿದ್ದಾರೆಂದು ಮಾಹಿತಿ ನೀಡಿದ್ದಾರೆ.