Home ಕರ್ನಾಟಕ ಕರ್ನಾಟಕ ಬರ ಪರಿಹಾರಕ್ಕೆ ಮನವಿ ಸಲ್ಲಿಸಲು 3 ತಿಂಗಳು ವಿಳಂಬ ಮಾಡಿದೆ ಎಂಬ ಅಮಿತ್‌ ಶಾ...

ಕರ್ನಾಟಕ ಬರ ಪರಿಹಾರಕ್ಕೆ ಮನವಿ ಸಲ್ಲಿಸಲು 3 ತಿಂಗಳು ವಿಳಂಬ ಮಾಡಿದೆ ಎಂಬ ಅಮಿತ್‌ ಶಾ ಹೇಳಿಕೆ ಸುಳ್ಳು : ಸಚಿವ ಕೃಷ್ಣಭೈರೇಗೌಡ

3
0

ಬೆಂಗಳೂರು : ಕರ್ನಾಟಕದವರು ಬರ ಪರಿಹಾರಕ್ಕೆ ಮನವಿ ಸಲ್ಲಿಸಲು ಮೂರು ತಿಂಗಳು ವಿಳಂಬ ಮಾಡಿದ್ದಾರೆ ಎಂದು ಅಮಿತ್‌ ಶಾ ಸುಳ್ಳು ಹೇಳಿದ್ದಾರೆ. ಆ ಮೂಲಕ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಮುಚ್ಚಿಕೊಳ್ಳಲು ಮುಂದಾಗಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಸೆಪ್ಟೆಂಬರ್ 22ರಂದು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಬರ ಪರಿಹಾರ ಕೋರಿ ಮನವಿ ಸಲ್ಲಿಸಿದೆ.  ಕೇಂದ್ರ ಸರ್ಕಾರದ ಬರಗಾಲ ಮಾನದಂಡದ ಪ್ರಕಾರ ಮುಂಗಾರು ಹಂಗಾಮಿನಲ್ಲಿ ಬರಗಾಲ ಘೋಷಣೆ ಮಾಡಬೇಕಾದರೆ ಅಕ್ಟೋಬರ್ 31ರವರೆಗೆ ಕಾಯಬೇಕು ಎಂದು ಹೇಳಿದೆ. ಕೇಂದ್ರ ಸರ್ಕಾರದ ಮಾನದಂಡದ ಕೈಪಿಡಿಯಲ್ಲಿರುವಂತೆ ವಿಶೇಷ ಸಂದರ್ಭದಲ್ಲಿ ಮಧ್ಯಭಾಗದಲ್ಲೇ ಘೋಷಿಸಬಹುದು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ಅಕ್ಟೋಬರ್ 31ರ ಬದಲಾಗಿ ಒಂದೂವರೆ ತಿಂಗಳು ಮೊದಲೇ ಅಂದರೆ ಸೆ.13ರಂದು ರಾಜ್ಯದಲ್ಲಿ ಬರ ಘೋಷಣೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

ನಾವು ಸೆಪ್ಟಂಬರ್ ನಲ್ಲಿ ಬರ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿರುವ ಬಗ್ಗೆ ಸಾಕ್ಷಿ ಬೇಕಾದರೆ, ಸೆ.27ರಂದು ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಗಳು ಬರೆದಿರುವ ಪತ್ರದ ಪ್ರತಿಯನ್ನು ನೀಡುತ್ತೇವೆ. ಇದರಲ್ಲಿ ಕೇಂದ್ರದ ಕೃಷಿ ಕಾರ್ಯದರ್ಶಿಗಳು, “ಕೇಂದ್ರ ಸರ್ಕಾರ ಅಂತರ ಇಲಾಖೆಯ ತಂಡವೊಂದನ್ನು ರಚಿಸಿ ಕರ್ನಾಟಕ ರಾಜ್ಯಕ್ಕೆ ಕಳುಹಿಸಿ ಬರ ಅಧ್ಯಯನ ನಡೆಸಲು ಹಾಗೂ ಕೇಂದ್ರದ ಪರಿಹಾರದ ಅಗತ್ಯತೆ ಅರಿಯಲು ತೀರ್ಮಾನಿಸಲಾಗಿದೆ. ನೈರುತ್ಯ ಮಾನ್ಸೂನ್ ನಲ್ಲಿ ಕರ್ನಾಟಕ ಮಳೆ ಕೊರತೆ ಎದುರಿಸಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟವಾಗಿದ್ದು, ಕರ್ನಾಟಕ ಸರ್ಕಾರ 31 ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. 41.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳ ಹಾನಿಯಾಗಿದ್ದು, ಶೇ.33ಕ್ಕಿಂತ ಹೆಚ್ಚು ನಷ್ಟವಾಗಿದೆ ಎಂದು ಪ್ರಸ್ತಾವ ಸಲ್ಲಿಸಿದೆ. ಆಮೂಲಕ ಎನ್ ಡಿಆರ್ ಎಫ್ ಮೂಲಕ ಬರ ಪರಿಹಾರ ಕೇಳಿದೆ” ಎಂದರು. 

ಆ ಮೂಲಕ ಸೆ.27ರಂದೇ ಕೇಂದ್ರ ಕೃಷಿ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಬರ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿರುವುದನ್ನು ಒಪ್ಪಿಕೊಂಡಿದೆ. ನವೆಂಬರ್ 8ರಂದು ಕೃಷಿ ಸಚಿವಾಲಯದ ಆದೇಶದ ಪತ್ರದಲ್ಲಿ, “ಕೇಂದ್ರ ಸರ್ಕಾರದ ತಂಡ ಕರ್ನಾಟಕಕ್ಕೆ ಭೇಟಿ ಕೊಟ್ಟು ಅಧ್ಯಯನ ನಡೆಸಿರುವ ವರದಿ ಪರಿಶೀಲಿಸಲು ನವೆಂಬರ್ 13ರಂದು ಸಭೆ ಕರೆಯಲಾಗಿದೆ” ಎಂದು ಹೇಳಿದರು.

ನವೆಂಬರ್ 20ರಂದು ಕೇಂದ್ರ ಸರ್ಕಾರದ ಕೃಷಿ ಕಾರ್ಯದರ್ಶಿಗಳು ಗೃಹ ಇಲಾಖೆಗೆ ಪತ್ರ ಬರೆದಿದ್ದು, ಇದರಲ್ಲಿ “ಕರ್ನಾಟಕದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ತಂಡ ನೀಡಿರುವ ವರದಿಯ ಶಿಫಾರಸು ಪರಿಶೀಲಿಸಿ, ಅಂತಿಮ ಶಿಫಾರಸ್ಸನ್ನು ಗೃಹಸಚಿವರಿಗೆ ಕಳುಹಿಸಿಕೊಟ್ಟು, ಗೃಹ ಸಚಿವರು ಆದಷ್ಟು ಶೀಘ್ರವಾಗಿ ಉನ್ನತ ಮಟ್ಟದ ಸಭೆ ಕರೆದು ಕರ್ನಾಟಕ ರಾಜ್ಯಕ್ಕೆ ಎನ್ ಡಿಆರ್ ಎಫ್ ಮೂಲಕ ಶಿಫಾರಸು ನೀಡಬೇಕು ಎಂದು ಪತ್ರ ಬರೆಯಲಾಗಿದೆ” ಎಂದು ತಿಳಿಸಲಾಗಿದೆ. ಇದರೊಂದಿಗೆ ಗೃಹ ಸಚಿವರಿಗೆ ರಾಜ್ಯ ಬರ ಪರಿಹಾರದ ಅಂತಿಮ ಶಿಫಾರಸು ಪತ್ರ ನವೆಂಬರ್ 20ಕ್ಕೆ ತಲುಪಿದೆ. ನವೆಂಬರ್ 20ರಿಂದ ಇಲ್ಲಿಯವರೆಗೂ ಕರ್ನಾಟಕ ಬರಕ್ಕೆ ಸಂಬಂಧಿಸಿದ ಶಿಫಾರಸು ಗೃಹಸಚಿವರ ಕೊಠಡಿಯಲ್ಲಿ ಧೂಳು ಕುಡಿಯುತ್ತಿದೆ. ಚುನಾವಣೆ ಘೋಷಣೆಗೂ ಮುನ್ನ ಬಿಜೆಪಿ ಸರ್ಕಾರಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ನಾಲ್ಕು ತಿಂಗಳು ಕಾಲಾವಕಾಶವಿತ್ತು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ಪರಿಹಾರ ಪ್ರಾಧಿಕಾರ ಜನವರಿ 16ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, “ಕೃಷಿ ಇಲಾಖೆಯ ಕಾರ್ಯದರ್ಶಿಗಳ ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯದ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸಭೆ ಮಾಡಬೇಕು” ಎಂದು ತಿಳಿಸಿತ್ತು. ಇಲ್ಲಿಯವರೆಗೂ ಸಭೆ ಆಗಿಲ್ಲ, ರಾಜ್ಯಕ್ಕೆ ಬರಬೇಕಾದ ಹಣ ಬಂದಿಲ್ಲ ಎಂದರು.

ನಾನು, ಕೃಷಿ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಕೃಷಿ ಸಚಿವರು, ಹಣಕಾಸು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರದ ಪಾಲಿಗೆ ನಾವುಗಳು ಸಣ್ಣವರಾಗಿರಬಹುದು. ನಮ್ಮ ಭೇಟಿಗೆ ಅವರು ಪ್ರಾಮುಖ್ಯತೆ ನೀಡದಿರಬಹುದು ಎಂದರು.

ಮುಖ್ಯಮಂತ್ರಿಗಳು ಸೆ.23ರಂದು ಕೃಷಿ ಇಲಾಖೆಗೆ ಪತ್ರ ಬರೆದಿದ್ದಾರೆ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ನವೆಂಬರ್ 15ರಂದು ಪತ್ರ ಬರೆಯುತ್ತಾರೆ. ನವೆಂಬರ್ 15ರಂದು ಮುಖ್ಯಮಂತ್ರಿಗಳು ಕೇಂದ್ರ ಗೃಹಸಚಿವರಿಗೆ ಪತ್ರ ಬರೆದು ತಕ್ಷಣವೇ ಎನ್ ಡಿಆರ್ ಎಫ್ ಅಡಿಯಲ್ಲಿ ಕರ್ನಾಟಕಕ್ಕೆ ಬರಬೇಕಾದ ಬರ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ನವೆಂಬರ್ 27ರಂದು ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಬರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ನವೆಂಬರ್ 27ರಂದು ಮುಖ್ಯಮಂತ್ರಿಗಳು ಗೃಹ ಸಚಿವರಿಗೆ 2ನೇ ಪತ್ರ ಬರೆದಿದ್ದಾರೆ. ನಾನು ಹಾಗೂ ಮುಖ್ಯಮಂತ್ರಿಗಳು ಡಿಸೆಂಬರ್ 19ರಂದು ಬರ ಪರಿಹಾರ ನೀಡುವಂತೆ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಡಿಸೆಂಬರ್ 20ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಇಷ್ಟಾದರೂ ನಮಗೆ ಕೇಂದ್ರ ಸರ್ಕಾರದಿಂದ ಸ್ಪಂದನೆ ಸಿಗಲಿಲ್ಲ. ನಂತರ ಜನವರಿ 19ರಂದು  ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಾಗ ಮತ್ತೊಮ್ಮೆ ಪತ್ರದ ಮೂಲಕ ಬರ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಇಷ್ಟೆಲ್ಲಾ ಆದರೂ ಈಗ ರಾಜ್ಯಕ್ಕೆ ಬಂದು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಜ.16ರಂದು ತಾವು ಸಭೆ ಸೂಚನಾ ಪತ್ರ ಹೊರಡಿಸಿರಲಿಲ್ಲವೇ ಎಂದು ಪ್ರಮಾಣ ಮಾಡಲಿ. ಕರ್ನಾಟಕದ ಜನರಿಗೆ ಅನ್ಯಾಯ, ಮೋಸ ಮಾಡಿ ಅದನ್ನು ಮುಚ್ಚಿಕೊಳ್ಳಲು ಹಸಿ ಹಸಿ ಸುಳ್ಳು ಹೇಳುವುದಕ್ಕೆ ನಾಚಿಕೆಯಾಗುವುದಿಲ್ಲವೇ? ಕನ್ನಡಿಗರು ಇರುವುದು ಕೇವಲ ನಿಮಗೆ ತೆರಿಗೆ ಕಟ್ಟಲು, ಮತ ಹಾಕಲು ಮಾತ್ರವೇ?. ನಮಗೆ ಯಾಕೆ ಈ ಅನ್ಯಾಯ? ಮುಖ್ಯಮಂತ್ರಿಗಳು ಕೇಳಿದಂತೆ ಬಿಜೆಪಿಯವರಿಗೆ ಕರ್ನಾಟಕದ ರೈತರನ್ನು ಕಂಡರೆ ಯಾಕೆ ಈ ಪರಿಯ ದ್ವೇಷ? ಅತಿ ಹೆಚ್ಚು ತೆರಿಗೆ ಕಟ್ಟುತ್ತಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ತೆರಿಗೆಯನ್ನು ಬೇರೆ ರಾಜ್ಯಗಳಿಗೆ ನೀಡಿ, ಬರಗಾಲ ಬಂದಾಗಲೂ ನಮಗೆ ಮೋಸ ಮಾಡಿ, ಸುಳ್ಳು ಹೇಳುತ್ತಿರುವ ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.

 

ಅಮಿತ್ ಶಾ ಅವರು ಹೇಳಿರುವಂತೆ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದು ನಿಜವೇ ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಕ್ಷಣವೇ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.

LEAVE A REPLY

Please enter your comment!
Please enter your name here