Home Uncategorized ಕೆಜಿಎಫ್‍ನ  967 ಎಕರೆ ಜಾಗದಲ್ಲಿ ಕೈಗಾರಿಕೆ ಟೌನ್ ಶಿಪ್: ಸಚಿವ ನಿರಾಣಿ  

ಕೆಜಿಎಫ್‍ನ  967 ಎಕರೆ ಜಾಗದಲ್ಲಿ ಕೈಗಾರಿಕೆ ಟೌನ್ ಶಿಪ್: ಸಚಿವ ನಿರಾಣಿ  

14
0

ಕೆಜಿಎಫ್‍ನ ಬಿಇಎಂಎಲ್ ಸಂಸ್ಥೆಯ ಬಳಕೆ ಮಾಡದ 967 ಎಕರೆಜಾಗದಲ್ಲಿ ಕೈಗಾರಿಕೆ ಟೌನ್ ಶಿಪ್ ಮಾಡುವ ಕುರಿತು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾಸಚಿವ ಮುರುಗೇಶ್ ಆರ್ ನಿರಾಣಿ ವಿಧಾನಪರಿಷತ್‍ಗೆ ಮಂಗಳವಾರ ತಿಳಿಸಿದರು. ಬೆಳಗಾವಿ: ಕೆಜಿಎಫ್‍ನ ಬಿಇಎಂಎಲ್ ಸಂಸ್ಥೆಯ ಬಳಕೆ ಮಾಡದ 967 ಎಕರೆಜಾಗದಲ್ಲಿ ಕೈಗಾರಿಕೆ ಟೌನ್ ಶಿಪ್ ಮಾಡುವ ಕುರಿತು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾಸಚಿವ ಮುರುಗೇಶ್ ಆರ್ ನಿರಾಣಿ ವಿಧಾನಪರಿಷತ್‍ಗೆ ಮಂಗಳವಾರ ತಿಳಿಸಿದರು.
 
ಪ್ರಶ್ನೋತ್ತರ ವೇಳೆಯಲ್ಲಿ ಸಚಿವರು, ಕೆಜಿಎಫ್ ತಾಲೂಕಿನ ಬಂಗಾರದ ಗಣಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಬಿಇಎಂಎಲ್ ಕಾರ್ಖಾನೆ  ಸ್ಥಾಪಿಸಲು ಸುಮಾರು 1870. 30 ಎಕರೆ ಜಮೀನನ್ನು ಉದ್ದೇಶಿತ ಸಂಸ್ಥೆ ಉಪಯೋಗಿಸಿಕೊಂಡು ಬಾಕಿ ಉಳಿದಿರುವ 971. 33 ಎಕರೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ಅನ್ವಯ ಎಲ್ಲಾ ಋಣ ಭಾರದಿಂದ ಮುಕ್ತಗೊಳಿಸಿ ಕಂದಾಯ ಇಲಾಖೆಗೆ ವಶಪಡಿಸಿಕೊಳ್ಳಲು ಕೋಲಾರ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ನಿರಾಣಿ ಹೇಳಿದರು. 
 
ಕೆಜಿಎಫ್‍ನಲ್ಲಿನ 13 ಸಾವಿರ ಎಕರೆ ಜಮೀನನ್ನು ಚಿನ್ನದ ಗಣಿಗಾರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು. ಈಗ ಗಣಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಹೆಚ್ಚುವರಿಯಾಗಿ ಉಳಿದಿರುವ ಭೂಮಿಯನ್ನು ವಾಪಾಸ್ ಪಡೆದುಕೊಳ್ಳಲು ಕೇಂದ್ರ ಸರ್ಕಾರದ ಜೊತೆ ಸಂವಹನ ನಡೆಸಲಾಗಿತ್ತು. ಆರಂಭದಲ್ಲಿ 3, 500 ಎಕರೆಯನ್ನು ಮರಳಿಕೊಡುತ್ತೇವೆ ಎಂದು ಕೇಂದ್ರ ತಿಳಿಸಿತ್ತು. ಅದಕ್ಕೆ ಪೂರಕವಾಗಿ ಸ್ಪಷ್ಟವಾದ ಚಕ್ಕುಬಂದಿ ತಿಳಿಸಲು ಸೂಚಿಸಲಾಗಿತ್ತು. ರಾಜ್ಯ ಸರ್ಕಾರ ಸರ್ವೇ ನಡೆಸಿದಾಗ ಬಹಳಷ್ಟು ಭೂಮಿ ಒತ್ತುವರಿಯಾಗಿರುವುದು ಕಂಡುಬಂತು ಎಂದು ಸಚಿವ ನಿರಾಣಿ ಹೇಳಿದರು.
 
ಕೆಲವರು ಅಲ್ಲಿ ಮನೆಗಳನ್ನು ನಿರ್ಮಿಸಿರುವುದನ್ನು ಜಿಲ್ಲಾಧಿಕಾರಿ ಗುರುತಿಸಿದ್ದಾರೆ. ಸರ್ವೇ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದಾಗ ಅಲ್ಲಿನ ಸಮಿತಿ ಚರ್ಚೆ ನಡೆಸಿ, ಕೇವಲ 3,500 ಎಕರೆಯನ್ನಷ್ಟೇ ಅಲ್ಲ ಪೂರ್ತಿಭೂಮಿಯನ್ನು ವಾಪಾಸ್ ನೀಡುತ್ತೇವೆ. ಸಾಲದ ಹೊಣೆಗಾರಿಕೆಯೊಂದಿಗೆ ಭೂಮಿಯನ್ನು ವಾಪಾಸ್ ತೆಗೆದುಕೊಳ್ಳಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ನಿರಾಣಿ ಹೇಳಿದರು.
 
ಭೂಮಿಯ ಮೌಲ್ಯಕ್ಕಿಂತ ಸಾಲವೇ ಹೆಚ್ಚಿದೆ. ಅದಕ್ಕಾಗಿ ಒಮ್ಮೆಲೇ ಎಲ್ಲಾ ಭೂಮಿ ಬೇಡ. ಮೊದಲ ಹಂತದಲ್ಲಿ 3, 500 ಎಕರೆ ಮಾತ್ರ ನೀಡಿ. ನಂತರ ಎರಡನೇ ಹಂತದಲ್ಲಿ ಉಳಿದ ಭೂಮಿ ಪಡೆದುಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರ ಸಲಹೆ ನೀಡಿದೆ. ಈ ಸಂವಹನದ ನಂತರ ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ನಿರಾಣಿ ಸ್ಪಷ್ಟ ಪಡಿಸಿದರು.
 
ಬೆಮೆಲ್‍ನಲ್ಲಿ ಹೆಚ್ಚುವರಿಯಾಗಿ 967 ಎಕರೆ ಭೂಮಿ ಕಂದಾಯ ಇಲಾಖೆ ಅಧೀನದಲ್ಲಿದೆ. ಅದನ್ನು ವಾಪಾಸ್ ಪಡೆದು ಕೈಗಾರಿಕೆಗಳಿಗೆ ಹಂಚಿಕೆ ಮಾಡಲು ಸರ್ಕಾರ ಸಿದ್ಧವಿದೆ. ಆದರೆ ಕಂದಾಯ ಇಲಾಖೆಯಿಂದ ಈವರೆಗೂ ಭೂಮಿ ಹಸ್ತಾಂತರವಾಗಿಲ್ಲ. ಭೂಮಿ ನಮ್ಮ ಇಲಾಖೆಗೆ ಬರುತ್ತಿದ್ದಂತೆ ಕೈಗಾರಿಕೆಗಳಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ನಿರಾಣಿ ಹೇಳಿದರು.

LEAVE A REPLY

Please enter your comment!
Please enter your name here