ಮಣಿಪಾಲ, ಜ.3: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಕಾರ್ಪೊರೇಟ್ ಕ್ರಿಕೆಟ್ ಲೀಗ್ನ 3ನೇ ಆವೃತ್ತಿ ಜನವರಿ 5ರಿಂದ 7ರವರೆಗೆ ಮಣಿಪಾಲ ದಲ್ಲಿರುವ ಮಾಹೆಯ ಎಂಡ್ ಪಾಯಿಂಟ್ ಮೈದಾನದಲ್ಲಿ ನಡೆಯಲಿದೆ.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಆಯೋಜಿಸಲ್ಪಡುವ ಈ ಕ್ರಿಕೆಟ್ ಲೀಗ್ನಲ್ಲಿ ಕಾರ್ಪೊರೇಟ್ ಕಂಪೆನಿಗಳು, ಬ್ಯಾಂಕ್ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು ಮಾಧ್ಯಮಗಳ ತಂಡಗಳು ಪಾಲ್ಗೊಳ್ಳಲಿವೆ.
ಈ ಕ್ರಿಕೆಟ್ ಲೀಗ್ನ ಭಾಗವಾಗಿ ಬುಧವಾರ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಆಟಗಾರರ ಜರ್ಸಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಗಂಟಿಹೊಳೆ, ಕ್ರಿಕೆಟ್ನ ಉತ್ಸಾಹದ ಮೂಲಕ ಕಾರ್ಪೊರೇಟ್ ಸೌಹಾರ್ದತೆಯನ್ನು ಬೆಳೆಸುವಲ್ಲಿ ಇದು ಸಫಲವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆಎಂಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಡಾ.ಆನಂದ್ ವೇಣುಗೋಪಾಲ್, ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಡಾ.ಶಿರನ್ ಶೆಟ್ಟಿ, ಜಿಬು ಥಾಮಸ್, ಸಚಿನ್ ಕಾರಂತ್, ಡಾ.ಕೀರ್ತಿನಾಥ ಬಲ್ಲಾಳ , ಡಾ.ಅಣ್ಣಪ್ಪ ಶೆಟ್ಟಿ, ಸುರೇಶ ಶೆಟ್ಟಿ, ಜೀವನ್ ಶೆಟ್ಟಿ ಉಪಸ್ಥಿತರಿದ್ದರು.
ಕಸ್ತೂರ್ಬಾ ಹಾಸ್ಪಿಟಲ್ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಒಂದು ಪ್ರತಿಷ್ಠಿತ ಸ್ಪರ್ಧೆಯಾಗಿದ್ದು, ಒಟ್ಟು 24 ತಂಡಗಳು ಇದರಲ್ಲಿ ಭಾಗವಹಿಸಲಿವೆ. ಪ್ರತಿದಿನ ಬೆಳಗ್ಗೆ 8:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಲೀಗ್ ಪಂದ್ಯಗಳು ನಡೆಯಲಿದೆ. ಪಂಯಾಟದ ಉದ್ಘಾಟನೆ ಜ.5ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಲಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
