Home Uncategorized ಡಿ. 25ಕ್ಕೆ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ, ಮಹತ್ವದ ಘೋಷಣೆ: ಅದಕ್ಕೂ ಮೊದಲು ನಾಳೆಯಿಂದ ವಿವಿಧ ಮಠ,...

ಡಿ. 25ಕ್ಕೆ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ, ಮಹತ್ವದ ಘೋಷಣೆ: ಅದಕ್ಕೂ ಮೊದಲು ನಾಳೆಯಿಂದ ವಿವಿಧ ಮಠ, ನಾಯಕರ ಭೇಟಿ

5
0
Advertisement
bengaluru

ಬೆಂಗಳೂರು: ವಿಧಾನಸಭೆ ಚುನಾವಣೆ ಹೊತ್ತಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮನೆ ಮಾಡಿ ರಾಜಕೀಯದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ, ಗಣಿಧಣಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರಲಿದ್ದಾರಾ? ಅಥವಾ ಹೊಸ ರಾಜಕೀಯ ಪಕ್ಷ ಆರಂಭಿಸಲಿದ್ದಾರಾ? ಎನ್ನುವ ಪ್ರಶ್ನೆಗಳ ಮೇಲೆ ಭಾರೀ ಚರ್ಚೆಗಳಾಗುತ್ತಿವೆ. ಇದರ ಮಧ್ಯೆ ರೆಡ್ಡಿ ಡಿಸೆಂಬರ್ 25ಕ್ಕೆ ಸುದ್ದಿಗೋಷ್ಠಿ ಕರೆದಿದ್ದು, ಮಹತ್ವದ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಗಂಗಾವತಿಯನ್ನೇ ಆಯ್ಕೆ ಮಾಡಿಕೊಂಡಿದ್ಯಾಕೆ? ಕೊನೆಗೂ ಕಾರಣ ಕೊಟ್ಟ ಜನಾರ್ದನ ರೆಡ್ಡಿ

ಹೌದು…ಡಿಸೆಂಬರ್ 25ರಂದು ಬೆಂಗಳೂರಿನ ಪಾರಿಜಾತ ಅಪಾರ್ಟ್​ಮೆಂಟ್​ನಲ್ಲಿ ರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದು, ತಮ್ಮ ರಾಜಕೀಯ ನಿಲುವು ಬಗ್ಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆಗಳಿವೆ. ಮತ್ತೊಂದೆಡೆ ಹೊಸ ಪಕ್ಷ ಘೋಷಣೆ ಮಾಡ್ತಾರಾ ಎನ್ನುವ ಕುತೂಹಲ ಮೂಡಿಸಿದೆ. ಇನ್ನು ಮುಖ್ಯವಾಗಿ ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವ ಕ್ಷೇತ್ರವನ್ನು ಸಹ ಘೋಷಣೆ ಮಾಡುತ್ತಾರಾ ಎನ್ನುವ ಕುತೂಹಲ ಸೃಷ್ಟಿಯಾಗಿದೆ.

ಡಿಸೆಂಬರ್ 25ರಂದು ಸುದ್ದಿಗೋಷ್ಠಿಗೂ ಮುನ್ನ ರೆಡ್ಡಿ ಅವರು ವಿವಿಧ ಮಠಗಳಿಗೆ ಭೇಟಿ ನೀಡಲಿದ್ದಾರೆ. ಮಠಗಳು ಹಾಗೂ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ನಾಳೆಯಿಂದ (ಡಿ.19) ಜನಾರ್ದನ ರೆಡ್ಡಿ ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದು, ಡಿ. 20ರಂದು ಗದಗಿನ ಪುಟ್ಟರಾಜ ಗವಾಯಿಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ.

bengaluru bengaluru

ಡಿ. 21ರಂದು ಮಸ್ಕಿ ಕ್ಷೇತ್ರದಲ್ಲಿ ರಾಯಚೂರು ಬಳ್ಳಾರಿ, ಕೊಪ್ಪಳ ವಿಜಯನಗರ ಭಾಗದ ಪ್ರಮುಖ ಮುಖಂಡರ ಸಭೆ ನಡೆಸಲಿದ್ದಾರೆ. ಡಿ. 22ರಂದು ಗಂಗಾವತಿ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿ ಮತ್ತು ಅಂದು ಗಂಗಾವತಿಯಲ್ಲಿ ಪ್ರಮುಖ ಸಭೆ ನಡೆಸಲಿದ್ದಾರೆ. ಇನ್ನು ಅಂತಿಮವಾಗಿ ಡಿ.25ರಂದು ಬೆಂಗಳೂರಿನ ಪಾರಿಜಾತ ಅಪಾರ್ಟ್​ಮೆಂಟ್​ನಲ್ಲಿ ಸುದ್ದಿಗೋಷ್ಠಿ ಮಾಡಲಿದ್ದು, ಈ ವೇಳೆ ತಮ್ಮ ರಾಜಕೀಯ ನಿಲುವು ಪ್ರಕಟಿಸುವ ಸಾಧ್ಯತೆಗಳಿವೆ.

ದೆಹಲಿಯಿಂದ ಬಂದ ಬಳಿಕ ಡಿಸೆಂಬರ್ 18 ಕ್ಕೆ ಬಹಿರಂಗವಾಗಿ ಮಾತಾಡುವೆ ಎಂದು ಹೇಳಿದ್ದ ರೆಡ್ಡಿ, ಮತ್ತೆ ಕಮಲ ಪಕ್ಷ ಸೇರಲು ಉತ್ಸಾಹದಲ್ಲಿದ್ದಾರೆ. ಆದ್ರೆ, ಬಿಜೆಪಿ ಹೈಕಮಾಂಡ್​ ಏನು ಹೇಳಿದೆ ಎನ್ನುವುದೇ ನಿಗೂಢವಾಗಿದೆ. ಆದರೆ ಮೂಲಗಳ ಪ್ರಕಾರ ಜನಾರ್ದನ ರೆಡ್ಡಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಹೈಕಮಾಂಡ್​ ಸುತರಾಂ ಒಪ್ಪಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಸಿಡಿದೆದ್ದಿದ್ದು, ಬಿಜೆಪಿ ವಿರುದ್ಧವೇ ಹೊಸ ಪಕ್ಷ ಕಟ್ಟಿ ಸಡ್ಡು ಹೊಡೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ಇನ್ನೇನು ಐದು ತಿಂಗಳು ಇರುವಾಗಲೇ ರೆಡ್ಡಿ ರಾಜಕೀಯ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದಂತೂ ಸತ್ಯ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ


bengaluru

LEAVE A REPLY

Please enter your comment!
Please enter your name here