Home ಸಿನಿಮಾ ಧ್ರುವ ಸರ್ಜಾ ಇನ್ನು ‘ದುಬಾರಿ’

ಧ್ರುವ ಸರ್ಜಾ ಇನ್ನು ‘ದುಬಾರಿ’

221
0

ಬೆಂಗಳೂರು:

ಪೊಗರು ಬಳಿಕ ಧ್ರುವ ಸರ್ಜಾ ‘ದುಬಾರಿ’ಯಾಗುತ್ತಿದ್ದಾರೆ. ವಾಸವಿ ಎಂಟರ್​ಪ್ರೈಸಸ್​​ ಅಡಿಯಲ್ಲಿ ಉದಯ್ ಕೆ. ಮೆಹ್ತಾ ಪ್ರೊಡಕ್ಸನ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ, ಧ್ರುವ ಸರ್ಜಾ ನಾಯಕತ್ವದ ನೂತನ ಸಿನಿಮಾ ದುಬಾರಿಯ ಮುಹೂರ್ತ ಮತ್ತು ಶೀರ್ಷಿಕೆ ಅನಾವರಣ ಶುಕ್ರವಾರ ಬೆಳಗ್ಗೆ 5 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ನವರಂಗ ಗಣೇಶ್ ದೇವಸ್ಥಾನದಲ್ಲಿ ನೆರವೇರಿದೆ.

ಹಿರಿಯ ನಟ ದೊಡ್ಡಣ್ಣ ಮತ್ತು ನಟಿ ತಾರಾ ಆಗಮಿಸಿ ತಂಡದ ಮುಹೂರ್ತಕ್ಕೆ ಚಾಲನೆ ನೀಡಿ, ಕ್ಲಾಪ್​ ಮಾಡಿದರು. ಇನ್ನುಳಿದಂತೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಾಂತ್ರಿಕ ವರ್ಗ ಇದೇ ವೇಳೆ ಹಾಜರಾಗಿತ್ತು. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ, ಇದೇ ತಿಂಗಳ ಕೊನೆಯ ವಾರದಲ್ಲಿ ಚಿತ್ರೀಕರಣಕ್ಕೆ ನಿರ್ಧರಿಸಿದೆ.

ಪೊಗರು ಸಿನಿಮಾ ನಿರ್ದೇಶನ ಮಾಡಿರುವ ನಂದಕಿಶೋರ್​, ದುಬಾರಿ ಚಿತ್ರಕ್ಕೂ ಆ್ಯಕ್ಷನ್​ ಕಟ್​ ಹೇಳಲಿದ್ದು, ಈಗಾಗಲೇ ಚಿತ್ರಕಥೆ ಎಲ್ಲವೂ ಅಂತಿಮವಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ಉದಯ್​ ಮೆಹ್ತಾ, ‘ಪ್ರೀ ಪ್ರೊಡಕ್ಷನ್​ ಕೆಲಸಗಳು ಬಹುತೇಕ ಎಲ್ಲವೂ ಮುಗಿದಿವೆ. ಇನ್ನೇನಿದ್ದರೂ ಶೂಟಿಂಗ್​ ಶುರುಮಾಡುವುದಷ್ಟೇ ಕೆಲಸ. ಇದೇ ತಿಂಗಳ ಕೊನೆಯಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದೇವೆ. ಬೆಂಗಳೂರು, ಮಂಡ್ಯ ಮತ್ತು ವಿದೇಶದ ಹಲವೆಡೆ ಶೂಟಿಂಗ್ ನಡೆಯಲಿದೆ’ ಎಂದಿದ್ದಾರೆ.

ಈಗಾಗಲೇ 8 ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಉದಯ್ ಮೆಹ್ತಾ, ಇದೀಗ 9ನೇ ಚಿತ್ರದಲ್ಲಿ ಧ್ರುವ ಜತೆ ಕೈ ಜೋಡಿಸಿದ್ದಾರೆ. ಅದ್ದೂರಿ ವೆಚ್ಚದಲ್ಲಿ ಈ ಚಿತ್ರ ಸಿದ್ಧವಾಗಲಿದ್ದು, ಹಿಂದೆಂದೂ ಕಾಣಿಸದ ರೀತಿಯಲ್ಲಿ ಸ್ಟೈಲಿಶ್​ ಆಗಿ ಧ್ರುವ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನುಳಿದ ಪಾತ್ರವರ್ಗವನ್ನು ಶೀಘ್ರದಲ್ಲಿಯೇ ಘೋಷಣೆ ಮಾಡಲಿದೆಯಂತೆ ಚಿತ್ರತಂಡ.

ತಾಂತ್ರಿಕ ವರ್ಗದ ಆಯ್ಕೆಯೂ ಮುಗಿದಿದ್ದು, ಚಂದನ್ ಶೆಟ್ಟಿ ಸಂಗೀತ, ಶೇಖರ್ ಚಂದ್ರು ಛಾಯಾಗ್ರಹಣ, ಕೆ.ಎಂ ಪ್ರಕಾಶ್​ ಸಂಕಲನ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ, ಪ್ರಶಾಂತ್ ರಾಜಪ್ಪ ಸಂಭಾಷಣೆ, ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದು, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಶಿವಾರ್ಜುನ್ ಇರಲಿದ್ದಾರೆ.

LEAVE A REPLY

Please enter your comment!
Please enter your name here