Home ಕರ್ನಾಟಕ ಮ್ಯಾನ್ಮಾರ್: ಪ್ರಮುಖ ಗಡಿಪಟ್ಟಣ ಬಂಡುಕೋರರ ನಿಯಂತ್ರಣಕ್ಕೆ

ಮ್ಯಾನ್ಮಾರ್: ಪ್ರಮುಖ ಗಡಿಪಟ್ಟಣ ಬಂಡುಕೋರರ ನಿಯಂತ್ರಣಕ್ಕೆ

5
0

ಯಾಂಗಾನ್ : ಪೂರ್ವ ಮ್ಯಾನ್ಮಾರ್‍ನ ಪ್ರಮುಖ ಗಡಿಪಟ್ಟಣ ಮೈವಾಡ್ಡಿ ನಗರದ ಮೇಲೆ ನಿಯಂತ್ರಣ ಸಾಧಿಸಿರುವುದಾಗಿ ಬಂಡುಗೋರ ಪಡೆ ಘೋಷಿಸಿದ್ದು ಇದರೊಂದಿಗೆ ಥೈಲ್ಯಾಂಡ್‍ನೊಂದಿಗೆ ವ್ಯಾಪಾರದ ಪ್ರಮುಖ ಸಂಪರ್ಕ ಕೊಂಡಿಯ ಮೇಲಿನ ಹಿಡಿತವನ್ನು ಸೇನಾಡಳಿತ ಕಳೆದುಕೊಂಡಿದೆ ಎಂದು ವರದಿಯಾಗಿದೆ.

ಮೈವಾಡ್ಡಿ ನಗರದಿಂದ ತನ್ನ ಪಡೆಗಳನ್ನು ಸೇನಾಡಳಿತ ಹಿಂದಕ್ಕೆ ಕರೆಸಿಕೊಳ್ಳುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಸೇನಾಡಳಿತದ ವಿರುದ್ಧ ಬಂಡೆದ್ದಿರುವ ಹಲವು ಗುಂಪುಗಳು ಸಂಘಟಿತವಾಗಿ ಹೋರಾಟಕ್ಕೆ ಇಳಿದ ಕಾರಣ ಅಕ್ಟೋಬರ್ ನಿಂದ ಸೇನಾಡಳಿತಕ್ಕೆ ಭಾರೀ ಹಿನ್ನಡೆಯಾಗುತ್ತಿದೆ. ಕರೇನ್ ಜನಾಂಗೀಯ ಅಲ್ಪಸಂಖ್ಯಾತ ಗುಂಪು, ಕರೇನ್ ನ್ಯಾಷನಲ್ ಡಿಫೆನ್ಸ್ ಆರ್ಗನೈಸೇಷನ್ ಹಾಗೂ ಇತರ ಪ್ರಜಾಪ್ರಭುತ್ವ ಪರ ಸಂಘಟನೆಗಳು ಗುರುವಾರ ಬೆಳಿಗ್ಗೆ ಸೇನಾಡಳಿತದ ಪದಾತಿದಳದ 275ನೇ ತುಕಡಿಯನ್ನು ವಶಕ್ಕೆ ಪಡೆದ ಬಳಿಕ ಮೈವಾಡ್ಡಿ ನಗರವನ್ನು ವಶಪಡಿಸಿಕೊಂಡಿವೆ. ಥೈಲ್ಯಾಂಡ್ ಜತೆಗಿನ ಅತ್ಯಂತ ಸಕ್ರಿಯ ವ್ಯಾಪಾರ ಗಡಿದಾಟು ಆಗಿರುವ ಮೈವಾಡ್ಡಿ ನಗರ ಮೊಯೆಯಿ ನದಿಗೆ ಕಟ್ಟಿರುವ ಸೇತುವೆಯ ಮೂಲಕ ಥೈಲ್ಯಾಂಡ್‍ನ ಟಾಕ್ ಪ್ರಾಂತಕ್ಕೆ ಸಂಪರ್ಕ ಕೊಂಡಿಯಾಗಿದೆ.

ಕಳೆದ 5 ತಿಂಗಳಲ್ಲಿ ಸೇನೆಯು ಚಿನಾದ ಗಡಿಗೆ ಹೊಂದಿಕೊಂಡಿರುವ ಉತ್ತರದ ಶಾನ್ ರಾಜ್ಯ ಮತ್ತು ಪಶ್ಚಿಮದಲ್ಲಿ ರಖೈನ್ ರಾಜ್ಯದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದು ಹಲವು ಪ್ರಮುಖ ಗಡಿದಾಟುಗಳು ಬಂಡುಗೋರರ ವಶಕ್ಕೆ ಬಂದಿದೆ. 2021ರ ಫೆಬ್ರವರಿಯಲ್ಲಿ ಆಂಗ್‍ಸಾನ್ ಸೂಕಿ ಅವರ ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರ ವಶಪಡಿಸಿಕೊಂಡಿದ್ದ ಸೇನಾಡಳಿತದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ಹೆಚ್ಚಿದೆ.

ಕೆಎನ್‍ಯು ನೇತೃತ್ವದ ಜಂಟಿ ಪ್ರತಿರೋಧ ಪಡೆಗಳು ಮ್ಯಾವಡ್ಡಿಯಲ್ಲಿರುವ ಸೇನಾನೆಲೆಗಳನ್ನು ವಶಕ್ಕೆ ಪಡೆದಿವೆ. ಸೇನಾಡಳಿತಕ್ಕೆ ಪ್ರಮುಖ ಆದಾಯ ಮೂಲವಾಗಿದ್ದ ಮ್ಯಾವಡ್ಡಿಯನ್ನು ವಶಪಡಿಸಿಕೊಂಡಿರುವುದು ನಮ್ಮ ಪ್ರಮುಖ ಯಶಸ್ಸಾಗಿದೆ. ನಗರದಿಂದ ಹಿಂದೆ ಸರಿದ ಸೇನಾಡಳಿತದ ಸುಮಾರು 200 ಯೋಧರು ಥೈಲ್ಯಾಂಡ್‍ನ ಗಡಿದಾಟು ಬಳಿ ಗುಂಪುಗೂಡಿದ್ದಾರೆ. ಅವರಿಗೆ ಆಶ್ರಯ ಕಲ್ಪಿಸುವ ಬಗ್ಗೆ ಶೀಘ್ರವೇ ನಿರ್ಧರಿಸುವುದಾಗಿ ಥೈಲ್ಯಾಂಡ್ ಸರಕಾರ ಹೇಳಿದೆ’ ಎಂದು `ಕರೇನ್ ನ್ಯಾಷನಲ್ ಯೂನಿಯನ್’ನ ವಕ್ತಾರ ಸಾವ್‍ತಾವ್ ನೀ ಹೇಳಿದ್ದಾರೆ.

LEAVE A REPLY

Please enter your comment!
Please enter your name here